ಬೆಂಗಳೂರು: ಜನರ ತೆರಿಗೆ ಹಣದಿಂದ ನೀಡಿರುವ ಜಾಹೀರಾತಿನಲ್ಲಿ ಧೀಮಂತ ಸ್ವಾತಂತ್ರ್ಯ ಹೋರಾಟಗಾರ ಪಂಡಿತ ಜವಾಹರಲಾಲ ನೆಹರೂ ಅವರ ಭಾವಚಿತ್ರ ಪ್ರಕಟಿಸದೆ ಅವಮಾನ ಮಾಡಲಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸರ್ಕಾರ ಮಾಡಿರುವ ಈ ಅವಮಾನವನ್ನು ಸಹಿಸಲಾಗದು. ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊದಲು ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಸಿದ್ದು ಟ್ವೀಟ್ ಮಾಡಿ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರದ ಜಾಹೀರಾತಿನ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಮಾಜಿ ಪ್ರಧಾನಿ ಜವಾಹರಲಾಲ ನೆಹರೂ ಅವರ ಹೆಸರನ್ನು ಕೈಬಿಡುವಷ್ಟು ಕೀಳು ಮಟ್ಟಕ್ಕೆ ಮುಖ್ಯಮಂತ್ರಿಯವರು ಇಳಿಯಬಾರದಿತ್ತು, ಕುರ್ಚಿ ಉಳಿಸಲು ಈ ಪರಿಯ ಗುಲಾಮಗಿರಿಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಪಂಡಿತ ಜವಾಹರಲಾಲ್ ನೆಹರೂ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ತಮ್ಮ ಬದುಕಿನ 9 ವರ್ಷಗಳನ್ನು ಜೈಲಿನಲ್ಲಿ ಕಳೆದವರು ಎಂಬುದು ನೆನಪಿರಲಿ. ಅವರು ನಿಮ್ಮ ವಿ.ಡಿ.ಸಾವರ್ಕರ್ ಅವರಂತೆ ಜೈಲಿನಿಂದ ಬಿಡುಗಡೆಗೊಳ್ಳಲು ಬ್ರಿಟಿಷರ ಕಾಲು ಹಿಡಿದು ಕ್ಷಮೆ ಕೋರಿದ ಹೇಡಿ ಅಲ್ಲ ಎಂದು ಸಿದ್ದು ಜರಿದಿದ್ದಾರೆ.

