ನಾನು ಸಿಎಂ ಆಗುವುದನ್ನು ಯಾರೂ ತಪ್ಪಿಸಲಾಗಲ್ಲ -ಎಚ್ ಡಿ ಕೆ ಖಚಿತ ನುಡಿ

ಬೆಂಗಳೂರು: ಇನ್ನು 6-7 ತಿಂಗಳಲ್ಲಿ ನಿಮ್ಮ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಜೆಡಿಎಸ್ ಪಕ್ಷವು ಹೆಚ್ಚು ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ಪಕ್ಷಗಳು ನಮ್ಮ ಪಕ್ಷವನ್ನು ಲಘುವಾಗಿ ಕಾಣುತ್ತಿವೆ. ನಮ್ಮ ಶಕ್ತಿ ಏನೆಂದು ವಿಧಾನಸಭೆ ಚುನಾವಣೆ ನಡೆದ ನಂತರ ಗೊತ್ತಾಗಲಿದೆ ಎಂದು ಮಾರ್ಮಿಕವಾಗಿ ನುಡಿದರು.

ಗುಪ್ತಗಾಮಿನಿಯಂತೆ ಪಕ್ಷದ ಪರವಾಗಿ ಜನರ ಒಲವು ವ್ಯಕ್ತವಾಗುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳ ರಾಜಕೀಯ ಚೇಷ್ಟೆಗಳನ್ನು ನೋಡಿರುವ ಕನ್ನಡಿಗರು ರೋಸಿ ಹೋಗಿದ್ದಾರೆ ಹಾಗಾಗಿ ನಮ್ಮ ಪರ ಒಲವು ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಬಿಬಿಎಂಪಿ ವಾರ್ಡ್ ಮೀಸಲಾತಿಯನ್ನು ಬಿಜೆಪಿ ಸರಕಾರ ತನಗೆ ಬೇಕಾದ ರೀತಿ ಮಾಡಿಕೊಂಡಿದೆ ಎಂದು ಆರೋಪಿಸಿದರು.

ಬಿಜೆಪಿ ಸರಕಾರ ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಕೊವಿಡ್ ನಿಂದ ಮೃತಪಟ್ಟವರಿಗೆ ಪರಿಹಾರ ಹಣ ಕೊಡುತ್ತೇವೆ ಎಂದು ಹೇಳಿ ಕೊಡಲಿಲ್ಲ. ಬೆಂಗಳೂರಿನಲ್ಲಿ ಯಾವುದೇ ಕೆಲಸ ಮಾಡದೇ ಹಣ ಲೂಟಿ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದರು.ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತ ನಡೆಸಿ ಹೇಗೆ ನಡೆದುಕೊಂಡಿವೆ ಎನ್ನುವುದನ್ನು ಜನ ನೋಡಿದ್ದಾರೆ. ನಮಗೂ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.