ತುಮಕೂರು : ಸರ್ಕಾರ ನಡೆಯುತ್ತಿಲ್ಲ, ಮ್ಯಾನೇಜ್ ಮಾಡುತ್ತಿದ್ದೇವೆ ಎಂಬ ಹೇಳಿಕೆಯ ಆಡಿಯೋ ಲೀಕ್ ವಿಚಾರವಾಗಿ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಸಿಎಂ ಹೇಳಿದರೆ ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ.
ಈ ಬಗ್ಗೆ ಸಚಿವ ಜೆ.ಸಿ.ಮಾಧುಸ್ವಾಮಿ ತುಮಕೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿ, ಆಡಿಯೋ ತುಂಬಾ ಹಳೆಯದು. ಯಾವಾಗ ಮಾತನಾಡಿದ್ದೀನಿ ಅನ್ನೋದು ನನಗೆ ನೆನಪಿಲ್ಲ ಎಂದು ಹೇಳಿದರು.
ಆಡಿಯೋದಲ್ಲಿ ಇರುವ ಧ್ವನಿ ನನ್ನದೇ. ಆಡಿಯೋ ರೆಕಾರ್ಡಿಂಗ್ ಮಾಡಿದ ವ್ಯಕ್ತಿ ವಿರುದ್ಧ ದೂರು ನೀಡುತ್ತೇನೆ ಎಂದು ತಿಳಿಸಿದರು.
ಗೊತ್ತಿಲ್ಲದೇ ಕಾಲ್ ರೆಕಾರ್ಡ್ ಮಾಡುವುದು ಕೂಡ ಅಪರಾಧ. ಹಾಗಾಗಿ ಪ್ರಸಾರ ಮಾಡಿದ ಮಾಧ್ಯಮದ ಮೇಲೂ ಕೇಸ್ ಹಾಕುತ್ತೇನೆ ಎಂದು ತಿಳಿಸಿದರು.
ಅಪರಿಚಿತ ವ್ಯಕ್ತಿಯ ದಾಖಲೆಯನ್ನು ಮಾಧ್ಯಮದವರು ನೀಡಲಿ. ಯಾರೂ ನನ್ನ ವಿರುದ್ಧ ಷಡ್ಯಂತ್ರ ಮಾಡಿಲ್ಲ. ಯಾರನ್ನೂ ನಾನು ದೂಷಣೆ ಮಾಡುವುದಿಲ್ಲ ಎಂದರು.
ಈಗಾಗಲೇ ಸಿಎಂಗೆ ಸ್ಪಷ್ಟನೆ ನೀಡಿದ್ದೇನೆ. ರಾಜೀನಾಮೆ ಕೊಡುವ ಪ್ರಮೇಯ ಇಲ್ಲ. ಸಿಎಂ ಏನಾದರೂ ರಾಜೀನಾಮೆ ಕೇಳಿದರೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದರು.
ಅನಾಮಿಕ ವ್ಯಕ್ತಿ ನನಗೆ ಪ್ರಚೋದನೆ ನೀಡುತ್ತಿದ್ದ. ಹಾಗಾಗಿ ನಾನು ಮ್ಯಾನೇಜ್ ಮಾಡುತ್ತಿದ್ದೇವೆ ಎಂದು ಹೇಳಿದೆ. ಸಚಿವ ಸೋಮಶೇಖರ್ ಕುರಿತು ನಾನು ಗೌರವಯುತವಾಗಿ ಮಾತನಾಡಿದ್ದೇನೆ.
ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಸರ್ಕಾರದ ಬಗ್ಗೆ ಎರಡು ಮಾತಿಲ್ಲ. ಸಿಎಂ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಮಾದುಸ್ವಾಮಿ ಹೇಳಿದರು.

