ದಸರಾ ಗಜಪಡೆಗೆ ಭಾರ ಹೊರುವ ತಾಲೀಮು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಭರದ ಸಿದ್ಧತೆ ನಡೆದಿದ್ದು, ಗಜಪಡೆಗೆ ಭಾರ ಹೊರುವ ತಾಲೀಮು ಗುರುವಾರದಿಂದ ಪ್ರಾರಂಭವಾಗಿದೆ.

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿ ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿರುವ ಗಜಪಡೆಯ ನಾಯಕ ಅಭಿಮನ್ಯು ನೇತೃತ್ವದಲ್ಲಿ ಗಜಪಡೆಗೆ ಭಾರ ಹೊತ್ತು ತಾಲೀಮು‌ ನೀಡಲಾಗುತ್ತಿದೆ.

ದಿನಕ್ಕೆ ಎರಡು ಬಾರಿಯಂತೆ 5 ಕಿ.ಮೀ ತಾಲೀಮು ನಡೆಸಲು ತೀರ್ಮಾನಿಸಲಾಗಿದೆ.

ಆನೆಗಳ ಮೇಲಿಡುವ ಗಾದಿ ಮತ್ತು ನಮ್ದಾ ಇಟ್ಟು ಅರಮನೆ ಆವರಣದಲ್ಲಿರುವ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಪೂಜೆ ಸಲ್ಲಿಸಿ ತಾಲೀಮು ಆರಂಭಿಸಲಾಯಿತು.

ಈ ವೇಳೆ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಡಿಸಿಎಫ್ ಡಾ.ವಿ.ಕರಿಕಾಳನ್ ಮಾತನಾಡಿ  ಮೊದಲು 300 ಕೆ.ಜಿ ಮರಳಿನ ಮೂಟೆ ಇಟ್ಟು ತಾಲೀಮು ನಡೆಸಲಾಗುತ್ತಿದೆ.ನಂತರ ಮತ್ತೆ ಹೆಚ್ಚಿಸುತ್ತೇವೆ. 750ಕೆಜಿ ಬರುವ ತನಕ ತಾಲೀಮು ಮಾಡುತ್ತೇವೆ ಎಂದು ಹೇಳಿದರು.

ಅದಕ್ಕಾಗಿ ಈಗಾಗಲೇ ವಿಶೇಷ ಡಯಟ್ ಮೂಲಕ ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿದ್ದು ಗಜಪಡೆಯ ಭುಜದ ಬಲವನ್ನು ಹೆಚ್ಚಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ ಎಂದು ಕರಿಕಾಳನ್‌ ತಿಳಿಸಿದರು.

ಅರ್ಜುನ ಬಿಟ್ಟು 5 ಗಂಡಾನೆಗಳಿಗೆ ಭಾರ ಹೊರಿಸುವ ತಾಲೀಮನ್ನು ರೊಟೆಷನ್ ಆಗಿ ಐದು ದಿನ ನಡೆಸಲಾಗುತ್ತದೆ.

ಅರಮನೆಯಿಂದ ಬನ್ನಿಮಂಟಪ 5ಕಿ.ಮಿ.ಇದೆ.ಎರಡು ಮೂರು ದಿನಗಳು ಬರಿ ವಾಕ್ ಮಾಡಿಸಿದ್ದೇವೆ.ಆಗ ನಮಗೆ ಇಲ್ಲಿಂದ ಅಲ್ಲಿಗೆ ತಲುಪಲು ಒಂದುಕಾಲು ಗಂಟೆ ಹಿಡಿಯಿತು,ತೂಕ ಹಾಕಿ ಆನೆಗಳು ಸಾಗಿದಾಗ ಎಷ್ಟು ಗಂಟೆ ತೆಗೆದುಕೊಳ್ಳುತ್ತವೆ ನೋಡಬೇಕು ಎಂದರು.