ಸಿದ್ದರಾಮಯ್ಯ ಅವರಿಗೆ ಜೀವ ಬೆದರಿಕೆ ಇದೆಯೇ ಎಂಬುದರ ಬಗ್ಗೆ ತನಿಖೆ -ಸಿಎಂ

ಹಾವೇರಿ: ಸಿದ್ದರಾಮಯ್ಯ ಅವರಿಗೆ ನಿಜವಾಗಿಯೂ ಜೀವ ಬೆದರಿಕೆ ಇದೆಯೇ ಎಂಬುದರ ಬಗ್ಗೆ ಸೂಕ್ತ ತನಿಖೆ ಮಾಡುತ್ತೇವೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಹಾವೇರಿಯಲ್ಲ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಸಂಪತ್‌ಗೂ ಜೀವ ಬೆದರಿಕೆ ಇದೆಯೇ ಅನ್ನುವ ಬಗ್ಗೆಯೂ ತನಿಖೆ ನಡೆಸುತ್ತೇವೆ ಎಂದರು.
ಬಿಜೆಪಿಯದ್ದು ಜನೋತ್ಸವ ಅಲ್ಲ ಭ್ರಷ್ಟೋತ್ಸವ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, 5 ವರ್ಷ ಸಿದ್ದರಾಮಯ್ಯರ ಆಡಳಿತ ನೋಡಿಯೇ ಜನರು ಕಾಂಗ್ರೆಸ್ ಅನ್ನ ತಿರಸ್ಕಾರ ಮಾಡಿದ್ದಾರೆ ಎಂದು ಟಾಂಗ್ ನೀಡಿದರು.
ದೇಶದಲ್ಲಿ ಭ್ರಷ್ಟಾಚಾರ ಆರಂಭಿಸಿದ್ದೇ ಕಾಂಗ್ರೆಸ್. ನೆಲ, ಜಲ ಏನನ್ನೂ ಬಿಡಲಿಲ್ಲ. ಹಾಗೆ ಮಾಡಿದ್ದಕ್ಕೆ ಅವರನ್ನ ಜನ ತಿರಸ್ಕಾರ ಮಾಡಿದ್ದಾರೆ ಎಂದು ಹೇಳಿದರು.
ಅವರು ಸಿದ್ದರಾಮೋತ್ಸವ ಮಾಡಿದರು. ನಾವು ಜನೋತ್ಸವ ಮಾಡ್ತಿದ್ದೇವೆ. ಅಧಿಕಾರಕ್ಕೆ ಯಾರು ಬರಬೇಕು ಅನ್ನೋದನ್ನ ಜನರೇ ತೀರ್ಮಾನ ಮಾಡ್ತಾರೆ ಎಂದು ಬೊಮ್ಮಾಯಿ ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ  ಪಕ್ಷದ ಆಂತರಿಕ ವಿಚಾರ. ಹೈಕಮಾಂಡ್ ಜೊತೆ ಚರ್ಚಿಸಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುತ್ತೇವೆ ಎಂದು ಸಿಎಂ ಹೇಳಿದರು.