ಕೈ ಪಡೆಗೆ ಆಘಾತ ನೀಡಿದ ಗುಲಾಂ ನಬಿ

ನವದೆಹಲಿ: ಕಾಂಗ್ರೆಸ್‍ನ ಪ್ರಭಾವಿ ನಾಯಕ ಗುಲಾಂನಬಿ ಆಜಾದ್  ಪಕ್ಷದ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ನೀಡುವ ಮೂಲಕ, ಕೈ ಪಡೆಗೆ ಆಘಾತ ತಂದಿದ್ದಾರೆ.

ಜಮ್ಮುಕಾಶ್ಮೀರ ಮೂಲದ ಗುಲಾಂ ನಬಿ ಆಜಾದ್ ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರಲ್ಲಿ ಮೊದಲಿಗರಾಗಿದ್ದರು.

ರಾಜೀವ್ ಗಾಂಧಿ ಅವರ ನಂತರ ಪಕ್ಷದಲ್ಲಿ ಗುಲಾಂ ನಬಿ ಆಜಾದ್ ಅವರ ಮಾತಿಗೆ ಹೆಚ್ಚಿನ ಮನ್ನಣೆ ಇತ್ತು.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆಜಾದ್ ಅವರಿಗೆ ಅಳತೆ ಮೀರಿ ಅವಕಾಶಗಳನ್ನು ನೀಡಿದ್ದರು ಎಂಬ ಆಕ್ಷೇಪಗಳು ಕೂಡಾ ಇದ್ದವು.

ರಾಜ್ಯಸಭೆಯ ಪ್ರತಿಪಕ್ಷದ ನಾಯಕನ ಸ್ಥಾನ, ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಸಚಿವ ಸ್ಥಾನ, ಹಲವು ರಾಜ್ಯಗಳಲ್ಲಿ ಪಕ್ಷದ ಉಸ್ತುವಾರಿ ಸೇರಿದಂತೆ ಹೆಚ್ಚಿನ ಜವಾಬ್ದಾರಿಗಳನ್ನು ಆಜಾದ್ ಅವರಿಗೆ ವಹಿಸಲಾಗಿತ್ತು.

ಕಳೆದ ವರ್ಷ ಜಿ-23 ಗುಂಪು ಕಾಂಗ್ರೆಸ್ ನಾಯಕತ್ವದ ವಿರುದ್ಧ ಬಂಡಾಯದ ಕಹಳೆ ಊದಿತ್ತು.

ಎಐಸಿಸಿಗೆ ಮತ್ತೆ ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಬಾರದು ಎಂಬ ಅಭಿಪ್ರಾಯವನ್ನೊಳಗೊಂಡ ಪತ್ರವನ್ನು 23 ಹಿರಿಯ ನಾಯಕರು ಸೋನಿಯಾ ಗಾಂಧಿ ಅವರಿಗೆ ಬರೆದಿದ್ದರು.

ಈ ನಾಯಕರ ಗುಂಪಿನಲ್ಲಿ ಗುಲಾಂ ನಬಿ ಆಜಾದ್ ಮುಂಚೂಣಿ ಸ್ಥಾನ ವಹಿಸಿದ್ದರು. ನಂತರ ಪರಿಸ್ಥಿತಿ ತಿಳಿಗೊಂಡಿತ್ತು.

ಇತ್ತೀಚೆಗೆ ರಾಜ್ಯಸಭೆಯಿಂದ ಗುಲಾಂ ನಬಿ ಆಜಾದ್ ನಿವೃತ್ತರಾದಾಗ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರಮೋದಿ ಅವರನ್ನು ಹಾಡಿ ಹೊಗಳಿದ್ದರು.

ಶುಕ್ರವಾರ ಸೋನಿಯಾಗಾಂಧಿ ಅವರಿಗೆ ಸಲ್ಲಿಸಲಾಗಿರುವ ರಾಜೀನಾಮೆ ಪತ್ರದಲ್ಲಿ ಗುಲಾಂ ನಬಿ ಆಜಾದ್ ಹಿರಿಯ ನಾಯಕರನ್ನು ಬದಿಗಿರಿಸಿರುವುದು ಮತ್ತು ಅನನುಭವಿ ಕೂಟ ಹೆಚ್ಚಾಗಿರುವುದು ರಾಜೀನಾಮೆಗೆ ಕಾರಣ ಎಂದು ಹೇಳಲಾಗಿದೆ.

ರಾಹುಲ್ ಗಾಂಧಿ ಅವರನ್ನು ಅಪ್ರಬುದ್ಧ ಎಂದು ಟೀಕಿಸಿರುವ ಗುಲಾಂನಬಿ ಆಜಾದ್, ಅಪ್ರಬುದ್ಧತೆಗೆ ಪ್ರಮುಖ ಉದಾಹರಣೆ ಎಂದರೆ ಸಂಸತ್‍ನಲ್ಲಿ ಸರ್ಕಾರದ ಸುಗ್ರೀವಾಜ್ಞೆಯನ್ನು ಹರಿದು ಹಾಕಿದ ಬಾಲಿಶ ವರ್ತನೆ ಎಂದಿದ್ದಾರೆ.

ಕಾಂಗ್ರೆಸ್ ಪ್ರಸ್ತುತ ಸನ್ನಿವೇಶದಲ್ಲಿ ದೇಶಕ್ಕೆ ಬೇಕಾದುದ್ದನ್ನು ನಿರ್ಧರಿಸುವ ಮತ್ತು ಅದಕ್ಕಾಗಿ ಹೋರಾಡುವ ಸಾಮರ್ಥ್ಯವನ್ನು ಕಳೆದುಕೊಂಡಿದೆ. ದೇಶಕ್ಕೆ ಸರಿ ಎನಿಸಿದ್ದನ್ನು ಮಾಡುವ ಹಕ್ಕನ್ನು ಎಐಸಿಸಿ ಉಳಿಸಿಕೊಳ್ಳುತ್ತಿಲ್ಲ ಎಂದು ನಬಿ ಆಕ್ಷೇಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸುಮಾರು 50 ವರ್ಷಗಳ ಕಾಂಗ್ರೆಸ್‍ನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುತ್ತಿರುವುದಾಗಿ 5 ಪುಟಗಳ ರಾಜೀನಾಮೆ ಪತ್ರದಲ್ಲಿ ಆಜಾದ್ ವಿಷಾದ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ರಾಹುಲ್ ಗಾಂಧಿ ನಾಯಕತ್ವ ವಿರೋಧಿಸಿ ಈ ಮೊದಲು ಜ್ಯೋತಿರಾತ್ಯ ಸಿಂಧ್ಯ, ಜೈವೀರ್ ಸೆರ್ಗಿಲ್, ಜಿತಿನ್ ಪ್ರಸಾದ್ ಸೇರಿದಂತೆ ಹಲವು ನಾಯಕರು ಪಕ್ಷ ತೊರೆದಿದ್ದರು. ಇದೀಗ ಗುಲಾಂ ನಬಿ ಆಜಾದ್ ಕೂಡಾ ಕೈ ಬಿಟ್ಟಿರುವುದು ಕಾಂಗ್ರೆಸ್ ಗೆ ಗರಬಡಿದಂತಾಗಿದೆ.