ಮೈಸೂರು: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿಯಲ್ಲಿ ಚಿತ್ರದುರ್ಗದ ಮುರುಗರಾಜೇಂದ್ರ ಬೃಹನ್ಮಠದ ಡಾ.ಶಿವರಾತ್ರಿ ಮುರುಘಾ ಶರಣರ ವಿರುದ್ಧ ಪ್ರಕರಣ ದಾಖಲಾಗಿದೆ.
ಪೋಕ್ಸೋ ಕಾಯ್ದೆಯಡಿ ಮೈಸೂರಿನ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಚಿತ್ರದುರ್ಗಕ್ಕೆ ವರ್ಗಾವಣೆ ಮಾಡಲಾಗಿದೆ.
ಚಿತ್ರದುರ್ಗದ ಬೃಹನ್ಮಠದ ಆಡಳಿತದಲ್ಲಿರುವ ವಿದ್ಯಾರ್ಥಿನಿಲಯದ ಹಲವು ವಿದ್ಯಾರ್ಥಿನಿಯರಿಗೆ ಸ್ವಾಮೀಜಿಯವರು ಹಲವು ದಿನಗಳಿಂದಲೂ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎಂದು ದೂರಲಾಗಿದೆ.
ಸ್ವಾಮೀಜಿ ಅವರಿಂದ ತೊಂದರೆಗೊಳಗಾದ ವಿದ್ಯಾರ್ಥಿನಿಯರು ಮೈಸೂರಿನಲ್ಲಿರುವ ಒಡನಾಡಿ ಸಂಸ್ಥೆಯವರಿಗೆ ತಿಳಿಸಿದ್ದರಂತೆ.
ಒಡನಾಡಿ ಸಂಸ್ಥೆ ನೀಡಿದ ದೂರು ಆಧರಿಸಿ ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಶುಕ್ರವಾರ ವಿಚಾರಣೆ ನಡೆಸಿತ್ತು.
ವಿದ್ಯಾರ್ಥಿನಿಯರ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಮುರುಘಾ ಶರಣರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ತಿಳಿಸಿತ್ತು.
ಈ ಸಮಿತಿಯ ಸೂಚನೆ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ ಅವರ ದೂರು ಆಧರಿಸಿ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ.
ಘಟನೆ ಚಿತ್ರದುರ್ಗದಲ್ಲಿ ನಡೆದಿರುವುದರಿಂದ ಇಡೀ ಪ್ರಕರಣ ಚಿತ್ರದುರ್ಗಕ್ಕೆ ವರ್ಗಾವಣೆಯಾಗಿದೆ.
ದೂರಿನಲ್ಲಿರುವುದು: ಚಿತ್ರದುರ್ಗದ ಮುರುಘಾಮಠದ ವಿದ್ಯಾರ್ಥಿನಿಲಯದಲ್ಲಿರುವ ನಮ್ಮನ್ನು ಸ್ವಾಮೀಜಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯರು ದೂರಿದ್ದಾರೆ.
ಸ್ವಾಮೀಜಿಯವರಿಗೆ ಹಣ್ಣು ತೆಗೆದುಕೊಂಡು ಹೋಗಿ ಎಂದು ಮಹಿಳಾ ವಾರ್ಡನ್ ನಮ್ಮನ್ನು ಕಳುಹಿಸುತ್ತಿದ್ದರು. ಸ್ವಾಮೀಜಿ ಇದ್ದ ಸ್ಥಳಕ್ಕೆ ತೆರಳಿದರೆ ಅಲ್ಲಿ ನಮಗೆ ಮತ್ತು ಬರುವಂತೆ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು.
ಇಂಥ ಅನುಭವ ಹಲವು ವಿದ್ಯಾರ್ಥಿನಿಯರಿಗೆ ಆಗಿದ್ದರೂ ದೂರು ನೀಡಲು ಹೆದರುತ್ತಿದ್ದರು.
ನಮಗೆ ಚಿತ್ರದುರ್ಗದಲ್ಲಿ ನ್ಯಾಯ ಸಿಗಲಿಲ್ಲ ಎಂಬ ಕಾರಣಕ್ಕೆ ಮೈಸೂರಿನ ಒಡನಾಡಿ ಸಂಸ್ಥೆಗೆ ದೂರು ನೀಡಿದ್ದೇವೆ ಎಂದು ವಿದ್ಯಾರ್ಥಿನಿಯರು ಹೇಳಿಕೊಂಡಿದ್ದಾರೆ.
ಒಡನಾಡಿ ಸಂಸ್ಥೆಯವರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮಕ್ಕಳ ಹೇಳಿಕೆ ಆಧರಿಸಿ ದೂರು ನೀಡಿದ್ದರು.
ವಿಚಾರಣೆ ನಡೆಸಿದಾಗ ಮಕ್ಕಳು ತಮಗಾದ ಅನುಭವವನ್ನು ಸಮಿತಿಯ ಮುಂದೆ ತೋಡಿಕೊಂಡಿದ್ದರು.
ವಿಸ್ತೃತ ವಿಚಾರಣೆ ನಂತರ ಸಮಿತಿಯು ಮೊಕದ್ದಮೆ ದಾಖಲಿಸಲು ಮಕ್ಕಳ ರಕ್ಷಣಾಧಿಕಾರಿಗೆ ಆದೇಶಿಸಿತ್ತು.
ಸಮಿತಿ ಅಧ್ಯಕ್ಷರಾದ ಕಮಲ ಅವರು ರಜೆಯಲ್ಲಿದ್ದ ಕಾರಣ ಹಿರಿಯ ಸದಸ್ಯ ಧನಂಜಯ ಎಲಿಯೂರು, ಸದಸ್ಯರಾದ ಅಶೋಕ ಹಾಗೂ ಸವಿತಾಕುಮಾರಿ ವಿಚಾರಣೆ ನಡೆಸಿದರು.
ಸ್ವಾಮೀಜಿಯವರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಕುರಿತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ದೂರು ನೀಡಿದ್ದು ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಚಿತ್ರದುರ್ಗದಲ್ಲಿ ನಡೆದ ಘಟನೆಯಾಗಿರುವುದರಿಂದ ಚಿತ್ರದುರ್ಗಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಡಿಸಿಪಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾನೂನು ಹೋರಾಟ-ಮಠಕ್ಕೆ ವಿರೋದಿಗಳಾಗಿರುವವರು ಇಂತಹ ಕೆಟ್ಟ ಆರೋಪ ಮಾಡಿಸಿದ್ದಾರೆ.ಸದ್ಯದ ಪರಿಸ್ಥಿತಿಯಲ್ಲಿ ಮುರುಘಾಶ್ರೀಗಳು ಪ್ರತಿಕ್ರಿಸುವ ಸ್ಥಿತಿಯಲ್ಲಿ ಇಲ್ಲ ಎಂದು ಮಠದ ಪರ ವಕೀಲ ವಿಶ್ವನಾಥಯ್ಯ ಹೇಳಿದ್ದಾರೆ.
ಕಾನೂನು ಹೋರಾಟ ಮಾಡುತ್ತೇವೆ.ಮಠದ ವಿರೋಧಿಗಳು ವಿದ್ಯಾರ್ಥಿನಿಯರ ತಲೆ ಕೆಡಿಸಿ ಶ್ರೀಗಳ ವಿರುದ್ಧ ಇಂತಹ ಕೆಟ್ಟ ದೂರು ಕೊಡಿಸಿದ್ದಾರೆ.ನಾವೂ ಕೂಡಾ ದೂರು ದಾಖಲಿಸುತ್ತೇವೆ ಎಂದು ವಿಶ್ವನಾಥಯ್ಯ ತಿಳಿಸಿದ್ದಾರೆ.
ದೂರು ಸಲ್ಲಿಕೆ-ಮುರುಘಾ ಮಠದ ಆಡಳಿತಾದಿಕಾರಿ ಬಸವರಾಜನ್ ದಂಪತಿ ವಿರುದ್ದ ಮಠದ ಅದೀನದಲ್ಲಿರುವ ಹಾಸ್ಟೆಲ್ ವಾರ್ಡನ್ ರಶ್ಮಿ ಎಂಬವರು ದೂರು ದಾಖಲಿಸಿದ್ದಾರೆ.
ಮಠದ ಆಢಳಿತಾಧಿಕಾರಿ ಈ ರೀತಿ ಷಡ್ಯಂತ್ರ ರೂಪಿಸಿದ್ದಾರೆ ಆತನೇ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಅಲ್ಲದೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆಕೆ ದೂರಿದ್ದಾರೆ.
ಆಕ್ರೋಶ-ಮುರುಘಾ ಮಠದ ಶ್ರೀಗಳ ವಿರುದ್ಧ ದೂರು ನೀಡಲು ವಿರೋಧಿಗಳು ಷಡ್ಯಂತ್ರ ನಡೆಸಿದ್ದಾರೆ ಎಂದು ವೀರಶೈವ ಸಮಾಜದ ಅಧ್ಯಕ್ಷ ರಾಜಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವೂ ಕೂಡಾ ಕಾನೂನು ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

