ನಾಯಕತ್ವ ಬದಲಾವಣೆ ಇಲ್ಲ:ಮುಕ್ತ ಸ್ವಾತಂತ್ರ್ಯವಿದೆ -ಬೊಮ್ಮಾಯಿ

ಬೆಂಗಳೂರು: ನಾಯಕತ್ವ ಬದಲಾವಣೆ ವದಂತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ಕೇಂದ್ರ ಬಿಜೆಪಿ ವರಿಷ್ಠರು ನನಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದಾರೆ, ತಮ್ಮನ್ನು ವಿಧಾನಸಭೆ ಚುನಾವಣೆಗೂ ಮುನ್ನವೇ ಬದಲಾಯಿಸಿ ಬೇರೊಬ್ಬರಿಗೆ ಸಾರಥ್ಯ ನೀಡಲಾಗುತ್ತದೆ ಎಂಬುದರಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದರು.
ನನಗೆ ಕೇಂದ್ರ ಬಿಜೆಪಿ ನಾಯಕರ ಸಂಪೂರ್ಣ ಬೆಂಬಲವಿದೆ. ಆಡಳಿತದಲ್ಲಿ ಯಾರೂ ಹಸ್ತಕ್ಷೇಪ ಮಾಡುತ್ತಿಲ್ಲ, ಹೈಕಮಾಂಡ್ ಮುಕ್ತ ಸ್ವಾತಂತ್ರ್ಯ ನೀಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಬಿ.ಎಸ್.ಯಡಿಯೂರಪ್ಪನವರ ಕೈಗೊಂಬೆ ಸಿಎಂ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆಯಲ್ಲ ಎಂಬ ಪ್ರಶ್ನೆಗೆ  ಅವರಿಂದ ನಾನು ಸಲಹೆ ಹಾಗೂ ಮಾರ್ಗದರ್ಶನ ಪಡೆಯುತ್ತೇನೆ ಎಂದಿದ್ದಾರೆ.
ಸರ್ಕಾರದ ದೈನಂದಿನ ಆಡಳಿತದಲ್ಲಿ ಯಡಿಯೂರಪ್ಪನವರು ಹಸ್ತಕ್ಷೇಪ ಮಾಡಿಲ್ಲ. ಇದು ಪ್ರತಿಪಕ್ಷಗಳ ಕಲ್ಪನೆ ಎಂದು ತಿರುಗೇಟು ನೀಡಿದ್ದಾರೆ.
ಕರ್ನಾಟಕದಲ್ಲಿ ಯಡಿಯೂರಪ್ಪ ಅವರು ಒಬ್ಬ ಪ್ರಭಾವಶಾಲಿ ಹಾಗೂ ಸಮೂಹ ನಾಯಕ. ಅವರ ಅವಧಿಯಲ್ಲಿ ಜಾರಿ ಮಾಡಿದ್ದ ಜನಪರ ಕಾರ್ಯಕ್ರಮಗಳ ಅನುಷ್ಠಾನದಿಂದ ಉತ್ತೇಜನ ಪಡೆದಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಸರ್ಕಾರ ಮುನ್ನೆಡೆಸುವ ಸಂದರ್ಭದಲ್ಲಿ ಅವರ ಮಾರ್ಗದರ್ಶನ ಪಡೆಯುತ್ತೇವೆ. ನಮ್ಮ ಸರ್ಕಾರಕ್ಕೆ ಅವರ ಸಹಕಾರ ಮತ್ತು ಸಹಾಯ ಅತ್ಯಗತ್ಯ ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಹಿಂದೂ ಕಾರ್ಯಕರ್ತರ ಮೇಲೆ ದಾಳಿ ನಡೆದಿತ್ತು. ನಮ್ಮ ಅವಧಿಯಲ್ಲಿ ಎಲ್ಲರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು  ಸಮರ್ಥಿಸಿಕೊಂಡಿದ್ದಾರೆ.
ಕಾನೂನು ಕೈಗೆತ್ತಿಕೊಳ್ಳುವುದನ್ನು ನಾವು ಸಹಿಸುವುದಿಲ್ಲ. ಯಾರೂ ಕಾನೂನಿಗಿಂತ ದೊಡ್ಡವರಲ್ಲ. ಕಾನೂನು ಸಮಸ್ಯೆ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡ ನಂತರ ಅವರು ಸ್ಥಾನದಿಂದ ಕೆಳಗಿಳಿಯಬೇಕಾಯಿತು. 
ಭ್ರಷ್ಟಾಚಾರ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು, ಭ್ರಷ್ಟಾಚಾರ ಆರೋಪ ಮಾಡುವ ಗುತ್ತಿಗೆದಾರರು ಕಾಂಗ್ರೆಸ್ ಬೆಂಬಲಿತರಾಗಿದ್ದಾರೆ, ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.