ಮೈಸೂರು: ಮೈಸೂರು ಮಹಾನಗರ ಪಾಲಿಕೆ ಗಾದಿ ಈ ಬಾರಿಯೂ ಬಿಜೆಪಿ ಪಾಲಾಗಿದೆ.
ನೂತನ ಮೇಯರ್ ಆಗಿ ಬಿಜೆಪಿಯ ಶಿವಕುಮಾರ್ ಹಾಗೂ ಉಪ ಮೇಯರ್ ಆಗಿ ಜಿ.ರೂಪಾ ಆಯ್ಕೆಯಾಗಿದ್ದಾರೆ.
ಮಂಗಳವಾರ ಮಧ್ಯಾಹ್ನ ನಡೆದ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ನಡೆದಿತ್ತು.
ಕಾಂಗ್ರೆಸ್ ಗೆ ಟಕ್ಕರ್ ಕೊಡಲು ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿತು.
ಕಾಂಗ್ರೆಸ್ ನ ಗೋಪಿ ಹಾಗೂ ಜೆಡಿಎಸ್ ನ ಕೆ.ವಿ.ಶ್ರೀಧರ್ ನಾಮಪತ್ರ ಹಿಂಪಡೆದರು. ಹಾಗಾಗಿ ಬಿಜೆಪಿಗೆ ಮೇಯರ್ ಪಟ್ಟ ಒಲಿದಿದೆ.
ನಿರ್ಮಲಾ ಹರೀಶ್ ಅವರನ್ನು ಹೈಜಾಕ್ ಮಾಡಿದ್ದು, ಕಾಂಗ್ರೆಸ್ ಪರ ಮತಚಲಾಯಿಸಿದರು.
ಕಾಂಗ್ರೆಸ್ ನ ಸೈಯದ್ ಹಜರ್ ಉಲ್ಲಾ ಮತ್ತು ಬಿಜೆಪಿಯ ಶಿವಕುಮಾರ್ ನಡುವೆ ಪೈಪೋಟಿ ನಡೆಯಿತು.
ಕೊನೆಗೆ ಮೈಸೂರು ನೂತನ ಮೇಯರ್ ಆಗಿ 47ನೇ ವಾರ್ಡ್ ಸದಸ್ಯರಾದ ಶಿವಕುಮಾರ್ ಆಯ್ಕೆಯಾದರು.
ಬಿಜೆಪಿ ಸದಸ್ಯ ಶಿವಕುಮಾರ್ ಪರ 48 ಮತಗಳು ಬಂದಿವೆ.
ಉಪ ಮೇಯರ್ ಪಟ್ಟ ಕೂಡಾ ಬಿಜೆಪಿಗೇ ಒಲಿದಿದ್ದು 53ನೆ ವಾರ್ಡ್ ಸದಸ್ಯೆ ಜಿ.ರೂಪಾ ಯೋಗೀಶ್ ಗೆ ಈ ಗಾದಿ ಒಲಿಯಿತು.
ಜೆಡಿಎಸ್ ನ ರೇಷ್ಮಾ ಬಾನು ಅವರಿಗೆ ಉಮಮೇಯರ್ ಗಾದಿ ಒಲಿಯಬೇಕಿತ್ತು, ಆದರೆ ಅವರು ಬಿಸಿಎ ಸರ್ಟಿಫಿಕೆಟ್ ಸಲ್ಲಿಸದ ಕಾರಣ ತಾಂತ್ರಿಕ ಕಾರಣದಿಂದ ಅವರ ನಾಮಪತ್ರ ತಿರಸ್ಕೃತಗೊಂಡಿತು.
ಹಾಗಾಗಿ ಆಕೆಗೆ ಆ ಸ್ಥಾನ ಕೈತಪ್ಪಿ ರಾಪಾಗೆ ಅದೃಷ್ಟ ಕುಲಾಯಿಸಿತು.
ಪ್ರಾದೇಶಿಕ ಆಯುಕ್ತ ಜಿ.ಪ್ರಕಾಶ್ ನೇತೃತ್ವದಲ್ಲಿ ಮತದಾನ ಪ್ರಕ್ರಿಯೆ ನಡೆಯಿತು.
ಎರಡನೇ ಬಾರಿಗೆ ಪಾಲಿಕೆಯ ಇತಿಹಾಸದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಮೇಯರ್ ಸುನಂದಾ ಪಾಲನೇತ್ರ ಸೇರಿದಂತೆ ಬಿಜೆಪಿ ಸದಸ್ಯರು ಮತಚಲಾಯಿಸಿದರು.
ಜಿ.ಟಿ.ದೇವೇಗೌಡ,ಮರಿತಿಬ್ಬೇಗೌಡ ಅವರೂ ಕೂಡ ಬಿಜೆಪಿ ಅಭ್ಯರ್ಥಿ ಪರ ಮತಚಲಾಯಿಸಿದ್ದಾರೆಂದು ತಿಳಿದು ಬಂದಿದೆ.
ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ಡಾ.ಡಿ.ತಿಮ್ಮಯ್ಯ, ದಿನೇಶ್ ಗೂಳಿಗೌಡ್,ಶಾಸಕ ತನ್ವೀರ್ ಸೇಠ್, ಅನ್ವರ್ ಬೇಗ್ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದರು.
ಮತದಾನ ಮಾಡುವ ಸ್ಥಳದಲ್ಲಿ ಸಂಚಾರಿ ದೂರವಾಣಿಗಳಿಗೆ ನಿಷೇಧ ವಿಧಿಸಲಾಗಿತ್ತು. ಮೂರು ಪಕ್ಷಗಳಿಗೂ ಮೇಯರ್ ಆಯ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು.
ಕೊನೆಗೂ ಬಿಜೆಪಿಗೆ ಮೇಯರ್ ಪಟ್ಟ ಒಲಿದು ಬಂದಿದೆ,ಅಲ್ಲದೆ ಉಪಮೇಯರ್ ಗಾದಿಯ ಅದೃಷ್ಟ ವೂ ಕುಲಾಯಿಸಿತು.

