ಜನತೆ ಕೊಟ್ಟ ಅಧಿಕಾರವನ್ನು ಒಳ್ಳಯದಕ್ಕೆ ಬಳಸಿ: ಸಿಎಂಗೆ ಡಿಕೆಶಿ ಟಾಂಗ್

ಬೆಂಗಳೂರು: ಕೊಟ್ಟ ಕುದುರೆಯನ್ನೇರದೆ ಬೇರೊಂದು ಕುದುರೆಯನ್ನು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಮುಖ್ಯಮಂತ್ರಿಯನ್ನು ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಮಳೆ ಅನಾಹುತಗಳಿಗೆ ಕಾಂಗ್ರೆಸ್ ಕಾರಣ ಎಂದು ಮುಖ್ಯಮಂತ್ರಿ ಆರೋಪಿಸಿದ್ದುದಕ್ಕೆ ಈ ರೀತಿ ಡಿ.ಕೆ.ಶಿ ಪ್ರತಿಕ್ರಿಯಿಸಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಜನ ಅಧಿಕಾರ ಕೊಟ್ಟಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಒಳ್ಳೆಯ ಕೆಲಸ ಮಾಡುವತ್ತ ಗಮನಕೊಡಿ ಎಂದು ಸಲಹೆ ನೀಡಿದರು.
ಒಂದು ವೇಳೆ ಕಾಂಗ್ರೆಸ್ ಕಾಲದಲ್ಲಿ ಒತ್ತುವರಿಯಾಗಿದ್ದರೆ ವಿಳಂಬ ಯಾಕೆ ತಡ ಮಾಡದೆ ತನಿಖೆ ನಡೆಸಿ ಎಂದು ಒತ್ತಾಯಿಸಿದರು. 
ಕೊಟ್ಟ ಕುದುರೆ ಏರದೆ ಆರೋಪ ಮಾಡುತ್ತಾ ಕಾಲಹರಣ ಮಾಡಬೇಡಿ ಎಂದು ಲೇವಡಿ ಮಾಡಿದರು. 
ಬೆಂಗಳೂರಿನ ಇಂದಿನ ದುಸ್ಥಿತಿಗೆ ಸರ್ಕಾರ ಮತ್ತು ಅಧಿಕಾರಿಗಳ ಭ್ರಷ್ಟಾಚಾರವೇ ಕಾರಣ. ನಿಮ್ಮಿಂದ ಬೆಂಗಳೂರಿನ ಸಮಸ್ಯೆಯನ್ನು ಬಗೆಹರಿಸಲಾಗದಿದ್ದರೆ ರಾಜೀನಾಮೆ ಕೊಟ್ಟು ಬನ್ನಿ ಚುನಾವಣೆಗೆ ಹೋಗೋಣ ಎಂದು ಸವಾಲು ಹಾಕಿದರು.
ನಾವು ಪರಸ್ಪರ ಟೀಕೆ ಮಾಡಿಕೊಳ್ಳದೆ ಒಟ್ಟಾಗಿ ಸಮಸ್ಯೆಯನ್ನ ನಿಭಾಯಿಸಿ ಬೆಂಗಳೂರಿನ ವೈಭವವನ್ನು ಮರಳಿ ತಂದುಕೊಡುವ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.
ಇಂಧನ ಇಲಾಖೆ ಸೇರಿದಂತೆ ಹಿಂದಿನ ಸರ್ಕಾರದಲ್ಲಿನ ಭ್ರಷ್ಟಾಚಾರಗಳನ್ನು ತನಿಖೆಗೊಳಪಡಿಸುವುದಾಗಿ ಸರ್ಕಾರ ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಇಂಥ ಗೊಡ್ಡು ಬೆದರಿಕೆಗಳಿಗೆಲ್ಲ ಹೆದರುವ ಮಗನಲ್ಲ ನಾನು ಎಂದರು.
ಈಗಾಗಲೇ ವೈಯಕ್ತಿಕವಾಗಿ ನನ್ನ ಮೇಲೆ ಸಾಕಷ್ಟು ತನಿಖೆ ನಡೆಸುತ್ತಿದ್ದಾರೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ಬಿಜೆಪಿಯ ಬೇರೆ ಯಾರನ್ನೂ ತನಿಖೆ ಮಾಡಿಲ್ಲ. ನನ್ನ ಮೇಲೆ ನಿರಂತರ ತನಿಖೆ ನಡೆಸುತ್ತಿದ್ದಾರೆ. ಯಾವ ತನಿಖೆಯನ್ನಾದರೂ ಮಾಡಿಕೊಳ್ಳಲಿ ನಾನು ಹೆದರುವುದಿಲ್ಲ ಎಂದು ಹೇಳಿದರು.
ಜನರ ತೆರಿಗೆ ಹಣ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗುತ್ತಿಲ್ಲ. ದೆಹಲಿಗೆ ರವಾನೆಯಾಗುತ್ತಿದೆ ಎಂದು ಆರೋಪಿಸಿದರು.
ಪಿಎಸ್‍ಐ ಹಗರಣದಲ್ಲಿ ಬಿಜೆಪಿ ಶಾಸಕ ಬಸವರಾಜ ದಡೇಸೂರ್ ಅವರ ಹೇಳಿಕೆ ಒಂದು ತುಣುಕಷ್ಟೆ. ಪಿಎಸ್‍ಐ ಹಗರಣದ‌ ಬಗ್ಗೆ ನ್ಯಾಯಾಂಗ ತನಿಖೆಯಾದರೆ ಮಾತ್ರ ಸತ್ಯ ತಿಳಿಯಲು ಸಾಧ್ಯ. ಸರ್ಕಾರ ಹಗರಣವನ್ನು ಮುಚ್ಚಿ ಹಾಕುವ ಯತ್ನ ನಡೆಸುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದರು.