ಬೆಂಗಳೂರಿನ ದುಸ್ಥಿತಿಗೆ ಬಿಜೆಪಿಯ ದುರಾಡಳಿತ ಕಾರಣ: ಸಿದ್ದು ವಾಗ್ದಾಳಿ

ಬೆಂಗಳೂರು:  ಬೆಂಗಳೂರಿನ ದುಸ್ಥಿತಿಗೆ ಬಿಜೆಪಿಯ ದುರಾಡಳಿತ ಕಾರಣವೇ ಹೊರತು ಕಾಂಗ್ರೆಸ್ ಅಲ್ಲ ಎಂದು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ‌ ಹೇಳಿದ್ದಾರೆ. 
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಯಿಂದ ಉಂಟಾಗಿರುವ ಹಾನಿಯ ಕುರಿತು ನಾನು  ಸ್ಥಳ ಪರಿಶೀಲನೆ ನಡೆಸಿದೆ ಎಂದು ಹೇಳಿದರು.
ಅನೇಕ ಪ್ರದೇಶಗಳಲ್ಲಿ ನೀರು ಮನೆಗಳಿಗೆ ನುಗ್ಗಿದೆ. ಈ ಸಮಸ್ಯೆಗಳಿಗೆ ಹಿಂದಿನ ಸರ್ಕಾರ ಕಾರಣ ಎಂದು ಮುಖ್ಯಮಂತ್ರಿ ಆರೋಪಿಸಿದ್ದಾರೆ. 
2006ರಲ್ಲಿ 2022ರವರೆಗೆ 16ವರ್ಷಗಳ ಅವಧಿಯಲ್ಲಿ ಸಮ್ಮಿಶ್ರ ಸರ್ಕಾರ, ಅಂದರೆ ಬಿಜೆಪಿ, ಕಾಂಗ್ರೆಸ್ ಸರ್ಕಾರಗಳು ಆಡಳಿತ ನಡೆಸಿವೆ.
ಈಗ ಬಿಜೆಪಿ ಅಧಿಕಾರದಲ್ಲಿದೆ. ನಾವು ಆಡಳಿತದಲ್ಲಿದ್ದಾಗ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದೆವು. ಪ್ರವಾಹಕ್ಕೆ ಮುಖ್ಯ ಕಾರಣ ಕೆರೆಗಳಿಗೆ ನೀರು ಹರಿಯಲು ಸಂಪರ್ಕ ಇಲ್ಲದಿರುವುದು ಎಂದು ತಿಳಿಸಿದರು.
ಕೆರೆಗಳ ಹೂಳು ತೆಗೆಯದೆ ಇರುವುದು, ಒತ್ತುವರಿ ತೆರವು ಮಾಡದೇ ಇರುವುದು ಎಂದು ದೂರಿದರು.
ನಾನು ಸಿಎಂ ಆಗಿದ್ದಾಗ ಒತ್ತುವರಿ ಕುರಿತು ಸಮೀಕ್ಷೆ ನಡೆಸಲಾಗಿತ್ತು. 1953 ಒತ್ತುವರಿ ಪ್ರದೇಶಗಳನ್ನು ಗುರುತಿಸಿ, ಅದರಲ್ಲಿ 1300 ಒತ್ತುವರಿಯನ್ನು ತೆರವು ಮಾಡಿದ್ದೆವು
ನಂತರ ಅಧಿಕಾರಕ್ಕೆ ಬಂದ ಕುಮಾರಸ್ವಾಮಿ ಸರ್ಕಾರ ಮತ್ತು ಬಿಜೆಪಿ ಸರ್ಕಾರ ಯಾಕೆ ಒತ್ತುವರಿ ತೆರವು ಮಾಡಲಿಲ್ಲ, ಹೂಳು ತೆಗೆಸಲಿಲ್ಲ ಎಂದು ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಬಿಜೆಪಿ ಹೆಚ್ಚು ಕಾಲ ಅಧಿಕಾರ ನಡೆಸಿದೆ. ಅವರ ಪಕ್ಷದ ಶಾಸಕರ ಸಂಖ್ಯೆಯೇ ಹೆಚ್ಚಿದೆ. ಮೂರು ಜನ ಸಂಸದರು ಬಿಜೆಪಿಯಿಂದಲೇ ಗೆದ್ದಿದ್ದಾರೆ.
ಅದಕ್ಕೂ ಮೊದಲು ಅಧಿಕಾರ ನಡೆಸಿದ್ದ ಬಿಬಿಎಂಪಿ ಸದಸ್ಯರು ಏನು ಮಾಡುತ್ತಿದ್ದರು. ಈಗ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಮಳೆಯಿಂದಾಗಿ ವಾಹನದಿಂದ ಬಿದ್ದು ವಿದ್ಯುತ್ ಶಾಕ್‍ನಿಂದ ಸಿದ್ದಾಪುರದಲ್ಲಿ ಮೃತಪಟ್ಟ ಯುವತಿ ಕುಟುಂಬಕ್ಕೆ ಈ ವರೆಗೂ ಪರಿಹಾರ ಕೊಟ್ಟಿಲ್ಲ. ಬಿಬಿಎಂಪಿ ಮತ್ತು ಬೆಸ್ಕಾಂ ಒಬ್ಬರ ಮೇಲೆ ಒಬ್ಬರು ಬೆರಳು ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಸಿದ್ದು ಆರೋಪಿಸಿದರು.
ಸರ್ಕಾರದ ವಿರುದ್ಧ ಕಾಂಗ್ರೆಸ್ ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದರು.