ಮೈಸೂರು: ಬಿಜೆಪಿಯವರು ನನ್ನ ಮೇಲೆ ಯಾವುದೇ ಕೇಸ್ ಹಾಕಿದರೂ ಎದುರಿಸುಲು ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಕೆಲವರು ಫೋನ್ ಮಾಡಿ ರೋಪ್ ಹಾಕಿದ್ದಾರೆ ಎಂದು ಹೇಳಿದರು.
ನನಗೆ ಕೆಲವು ಅಧಿಕಾರಿಗಳೇ ಫೋನ್ ಮಾಡಿ ಹೇಳಿದ್ದಾರೆ. ಯಾರು ಏನೇ ಮಾಡಿದರೂ ನಾನು ಎದುರಿಸಲು ಸಿದ್ಧ ಎಂದು ತಿಳಿಸಿದರು.
ಭಾರತ್ ಜೋಡೋ ಯಾತ್ರೆಗೆ ವ್ಯಂಗ್ಯವಾಡಿರುವ ಬಿಜೆಪಿಗೆ ತಿರುಗೇಟು ನೀಡಿದ ಡಿಕೆಶಿ, ನಮಗೆ ಬಿಜೆಪಿ ಮಾರ್ಗದರ್ಶನ ಬೇಕಾಗಿಲ್ಲ. ನಾವು ಸೋತಿರಬಹುದು ಆದರೆ ನಮ್ಮಲ್ಲಿ ಬಿರುಕಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ನ ಅಂತರಾಳ ಬಿಜೆಪಿಗೆ ಏನು ಗೊತ್ತು ಗಾಂಧಿ ಹೆಸರು ನಮಗೆ ಸದಾ ಶಕ್ತಿ. ಕಾಂಗ್ರೆಸ್ನ ಜೋಡಿಸುವಂತಹದು ಏನಾಗಿದೆ ಎಂದು ಖಾರವಾಗಿ ಪ್ರಶ್ನಿಸಿದರು.
ಭಾರತ್ ಜೋಡೋ ಯಾತ್ರೆಗೆ ಬಹಳ ಪ್ರಾಮುಖ್ಯತೆ ಇದೆ. ಯಾರು ಎಷ್ಟು ಬೇಕಾದರೂ ಟೀಕೆ ಮಾಡಬಹುದು. ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದೆ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇರುತ್ತಾನೆ ಎಂದು ತಿಳಿಸಿದರು.
ಕರ್ನಾಟಕದ ಬಳ್ಳಾರಿಯಲ್ಲಿ ಸಮಾವೇಶ ನಡೆಯಲಿದೆ. ನಮ್ಮ ರಾಷ್ಟ್ರೀಯ ನಾಯಕರು ಇಲ್ಲಿ ನಡೆಯುತ್ತಿದ್ದಾರೆ ಎಂದರೆ ನಮಗೆ ಅದು ಒಂದು ಶಕ್ತಿ ಎಂದು ಹೇಳಿದರು.
ಇಂಧನ ಇಲಾಖೆ ಅಧಿಕಾರಿಗಳಿಗೆ ದಾಖಲೆ ತರುವಂತೆ ಹೆದರಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಅವರು ಈ ಬಗ್ಗೆ ಕೆಲ ಅಧಿಕಾರಿಗಳು ನನಗೆ ಕರೆ ಮಾಡಿದ್ದರು.
ನನ್ನ ಅವಧಿಯ ದಾಖಲೆ ತರುವಂತೆ ಒತ್ತಡ ಹಾಕಲಾಗುತ್ತಿದೆ. ನಾನು ಎಲ್ಲಾ ದಾಖಲೆಗಳನ್ನು ಕೊಡಿ ಎಂದು ಹೇಳಿದ್ದೇನೆ. ಈ ಮೂಲಕ ಕಾಂಗ್ರೆಸ್ ಮತ್ತು ನನ್ನನ್ನು ಹೆದರಿಸಲು ಬಿಜೆಪಿ ಮುಂದಾಗಿದೆ.
ನಾನು ಯಾವುದಕ್ಕೂ ಹೆದರುವವನಲ್ಲ. ಏನು ಬೇಕಾದರೂ ತನಿಖೆ ಮಾಡಿಕೊಳ್ಳಲಿ ಎಂದು ಡಿಕೆಶಿ ಸವಾಲು ಹಾಕಿದರು.
ಸಿಎಂ ಬಸವರಾಜ ಬೊಮ್ಮಾಯಿ ಸಮಗ್ರ ತನಿಖೆ ಹೇಳಿಕೆಗೆ ವ್ಯಂಗ್ಯವಾಡಿ ಚಡ್ಡಿ, ಪ್ಯಾಂಟು, ಹಾಸಿಗೆ, ಮೊಟ್ಟೆ ಇತ್ಯಾದಿ ಎಲ್ಲಾ ತನಿಖೆ ಮಾಡಲಿ. ನಾನು ಎಲ್ಲದಕ್ಕೂ ಸಿದ್ದ ಮೂರು ವರ್ಷ ಬೇಕಿತ್ತಾ ತನಿಖೆ ಆರಂಭಿಸಲು ಎಂದು ಪ್ರಶ್ನಿಸಿದರು.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬದನವಾಳು ಗ್ರಾಮಕ್ಕೆಅ.2ರಂದು ರಾಹುಲ್ ಗಾಂಧಿ ಭೇಟಿ ನೀಡುವ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಸಿದ್ಧತೆ ಪರಿಶೀಲನೆ ನಡೆಸಿದರು.
ಈ ವೇಳೆ 1927ರಲ್ಲಿ ಮಹಾತ್ಮಾ ಗಾಂಧಿಯವರು ಈ ಕೇಂದ್ರಕ್ಕೆ ಭೇಟಿ ನೀಡಿದ್ದರ ಸ್ಮರಣಾರ್ಥದ ಛಾಯಾಚಿತ್ರವನ್ನು ತಮ್ಮ ಮೊಬೈಲ್ ನಲ್ಲಿ ಡಿಕೆಶಿ ಸೆರೆಹಿಡಿದರು.

