ಕೆರೆ ನುಂಗಣ್ಣರ ಹೆಸರು ಸದನದಲ್ಲೇ ಬಹಿರಂಗ -ಅಶೋಕ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಾನೂನು ಬಾಹಿರವಾಗಿ ಯಾರು ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಇದೇ ಅಧಿವೇಶನದಲ್ಲೇ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿ ತಪ್ಪು ಮಾಡಿದ್ದಾರೊ , ಇಲ್ಲ ನಾನು ತಪ್ಪು ಮಾಡಿದ್ದೇನೋ, ನಮ್ಮ ಸಂಪುಟ ಸಹೋದ್ಯೋಗಿಗಳು ಮಾಡಿದ್ದಾರೋ ಒಟ್ಟಾರೆ ಯಾರು ಕೆರೆಗಳನ್ನು ನುಂಗಿ ನೀರು ಕುಡಿದಿದ್ದಾರೋ ಎಲ್ಲರ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ನಮ್ಮ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕಲೆಹಾಕಿ ದಾಖಲೆಗಳನ್ನು ಸಿದ್ದಪಡಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಕೆರೆಗಳನ್ನು ನುಂಗಿದ ಮೂಲ ಪುರುಷರು ಯಾರು, ಯಾವ ಯಾವ ಸರ್ಕಾರದಲ್ಲಿ ಎಷ್ಟು ಒತ್ತುವರಿಯಾಗಿದೆ ಎಂಬುದೆಲ್ಲವನ್ನು ಬಹಿರಂಗಪಡಿಸುತ್ತೇವೆ ಎಂದು ಹೇಳಿದರು.

ಇದಕ್ಕೆ ವಿಧಾನಸಭೆಯ ಸಭಾಧ್ಯಕ್ಷರ ಬಳಿ ಚರ್ಚಿಸಿ ಸಮಯ ನಿಗದಿಪಡಿಸಬೇಕೆಂದು ಮನವಿ ಮಾಡುತ್ತೇವೆ. ಅವರು ಯಾವ ಸಮಯ ನಿಗದಿಪಡಿಸುತ್ತಾರೋ ಅಂದೇ ಬಿಡಗಡೆ ಮಾಡುತ್ತೇನೆ ಎಂದು ತಿಳಿಸಿದರು.

ಅಧಿಕಾರಿಗಳ ಮೇಲೆ ಕೆಲವರು ಒತ್ತಡ ಹಾಕಿ ಕೆರೆಗಳನ್ನು ಮುಚ್ಚಿ ಕಟ್ಟಡಗಳನ್ನು ಕಟ್ಟಿದ ಪರಿಣಾಮ ಬೆಂಗಳೂರಿಗೆ ಈ ಪರಿಸ್ಥಿತಿ ಬಂದಿದೆ, ನೀರು ರಾಜಕಾಲುವೆಗೆ ಹೋಗದೆ ಜನವಸತಿ ಪ್ರದೇಶಗಳಿಗೆ ನುಗ್ಗಿದೆ.

ಯಾವ ಸರ್ಕಾರ, ಯಾವ ಮುಖ್ಯಮಂತ್ರಿಗಳು, ಅಧಿಕಾರಿಗಳು ಅನುಮೋದನೆ ಕೊಟ್ಟಿದ್ದರು ಎಂಬ ಬಗ್ಗೆ ದಾಖಲೆಗಳು ಲಭ್ಯವಾಗಿವೆ. ಸದನದಲ್ಲೇ ಬಹಿರಂಗಪಡಿಸುತೇವೆ ಎಂದು ಹೇಳಿದರು.

ಕಂದಾಯ ಸಚಿವನಾಗಿ ರಾಜ್ಯ ವಿಪತ್ತು ನಿರ್ವಹಣಾ ಮುಖ್ಯಸ್ಥನಾಗಿ ಸದಸ್ಯರ ಪ್ರಶ್ನೆಗಳಿಗೆ ಉತ್ತರ ಕೊಡುವುದು ನನ್ನ ಜವಾಬ್ದಾರಿ ಚರ್ಚೆ ಮುಗಿದ ಬಳಿಕ ಉತ್ತರ ಕೊಡುತ್ತೇನೆ ಎಂದರು.

ರಾಜ್ಯದ ವಿವಿಧ ಕಡೆ ಸರ್ಕಾರಕ್ಕೆ ಸೇರಿದ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಇದೇ ರೀತಿ ಬೆಂಗಳೂರಿನಲ್ಲೂ ಸಾಕಷ್ಟು ಭೂ ಕಬಳಿಕೆಯಾಗಿದೆ,ದಾಖಲೆಗಳ ಸಮೇತ ನುಂಗಣ್ಣರ ಹೆಸರುಗಳನ್ನು ಬಹಿರಂಗಪಡಿಸುತ್ತೇವೆ ಎಂದು ಅಶೋಕ್ ತಿಳಿಸಿದರು.