ತಿಪ್ಪರಲಾಗ ಹಾಕಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ -ಬಿ.ಎಸ್.ವೈ

ಹುಬ್ಬಳ್ಳಿ: ಭಾರತ್ ಜೋಡೊ ಅಥವಾ ಕಾಂಗ್ರೆಸ್ ಜೋಡೊ ಮಾಡಿಕೊಂಡು ಕರ್ನಾಟಕದಲ್ಲಿ ಏನೇ ತಿಪ್ಪರಲಾಗ ಹಾಕಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರ ಎಲ್ಲ ನಾಟಕಗಳನ್ನು ರಾಜ್ಯದ ಜನತೆ ನೋಡಿ ಅವರನ್ನು ಎಲ್ಲಿ ಇಡಬೇಕೊ ಅಲ್ಲಿಟ್ಟಿದ್ದಾರೆ ಎಂದು ಹೇಳಿದರು.
ನಾವು ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರು ತೇಲಾಡುತ್ತಿದ್ದಾರೆ. ಈಗಾಗಲೇ ಕೆಲವರು ಖಾತೆಗಳನ್ನು ಹಂಚಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಅವರ ಕನಸು ಯಾವುದೇ ಕಾರಣಕ್ಕೂ ನನಸಾಗುವುದಿಲ್ಲ. ಪ್ರತಿಪಕ್ಷದ ಸ್ಥಾನವೇ ಗಟ್ಟಿ ಎಂದು ಹೇಳಿದರು.
ರಾಜ್ಯದ ಜನತೆ ಬುದ್ದಿವಂತರಿದ್ದಾರೆ. ಯಾರನ್ನು ಅಧಿಕಾರಕ್ಕೆ ತರಬೇಕೆಂಬ ಪ್ರಬುದ್ದತೆ ಮತದಾರರಿಗಿದೆ. ದೇಶದಲ್ಲಿ ಅಸ್ತಿತ್ವ ಕಳೆದುಕೊಂಡು ಅಡ್ರೆಸ್ಸೇ ಇಲ್ಲದಂತಾಗಿರುವ ಕಾಂಗ್ರೆಸ್ ಅಷ್ಟೊಇಷ್ಟೋ ಉಸಿರಾಡುತ್ತಿರುವುದು ಕರ್ನಾಟಕದಲ್ಲಿ ಮಾತ್ರ.
ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಪರವಾಗಿ ಮತದಾರ ಇರುವಾಗ ಕಾಂಗ್ರೆಸ್‍ನ ನಾಟಕಗಳಿಗೆ ಸೊಪ್ಪು ಹಾಕುವುದಿಲ್ಲ ಎಂದು ತಿಳಿಸಿದರು
ಇದೇ 22ರಿಂದ ರಾಜ್ಯಾದ್ಯಂತ ಪ್ರವಾಸ ಆರಂಭಿಸುತ್ತೇನೆ. ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಪಕ್ಷದ ಪ್ರಮುಖರು ಪ್ರವಾಸ ನಡೆಸಲು ಸಿದ್ದರಾಗುತ್ತಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಜನತೆಗೆ ಮನವರಿಕೆ ಮಾಡಿಕೊಡಲಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.