ರಾತ್ರಿ 9ರಿಂದ 11ಗಂಟೆವರೆಗೆ ಅರಮನೆಯ ಸುತ್ತ ವಾಹನ ಸಂಚಾರ ನಿಷೇಧ

ಮೈಸೂರು: ದಸರಾ ವೇಳೆ ಸಾರ್ವಜನಿಕರು ಯಾವುದೇ ಕಿರಿಕಿರಿ ಇಲ್ಲದೆ ದೀಪಾಲಂಕಾರ ವೀಕ್ಷಿಸಲು ಅನುಕೂಲವಾಗುವಂತೆ ಅರಮನೆಯ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ಬುಧವಾರದಿಂದ ಅಕ್ಟೋಬರ್ 4ರವರೆಗೆ ಪ್ರತಿದಿನ ರಾತ್ರಿ 9ರಿಂದ 11ಗಂಟೆಯವರೆಗೆ ಅರಮನೆ ಸುತ್ತ,ಮುತ್ತ ವಾಹನ ಸಂಚಾರವನ್ನು ನಿಷೇಧಿಸಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.

ರಾತ್ರಿ ವೇಳೆ ಮೈಸೂರು ಹೃದಯಭಾಗದಲ್ಲಿ ದೀಪಾಲಂಕಾರ ನೋಡಲು ಜನರು ವಾಹನಗಳಲ್ಲಿ ಬರುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗಿ ತೀವ್ರ ತೊಂದರೆಯಾಗುತ್ತಿರುವುದನ್ನು ಮನಗಂಡು ಈ ಕ್ರಮ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಹಾರ್ಡಿಂಜ್ ಸರ್ಕಲ್, ಚಾಮರಾಜ ಸರ್ಕಲ್, ಕೃಷ್ಣರಾಜ ಸರ್ಕಲ್, ಸಯ್ಯಾಜಿರಾವ್ ರಸ್ತೆ, ಮಹಾರಾಜ ಸಂಸ್ಕೃತ ಪಾಠಶಾಲೆ ಸರ್ಕಲ್, ಗನ್ ಹೌಸ್ ಸರ್ಕಲ್ ನಿಂದ ಹಾರ್ಡಿಂಜ್ ಸರ್ಕಲ್ ವರೆಗಿನ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ.

ಅರಮನೆ ಸುತ್ತ ಆಯುಧ ಪೂಜಾ ದಿನ ಅಂದರೆ ಅ.4ರವರೆಗೆ ರಾತ್ರಿ 9ರಿಂದ 11ಗಂಟೆಯವರೆಗೆ ಎಲ್ಲಾ ಬಗೆಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಡಾ.ಚಂದ್ರಗುಪ್ತ ತಿಳಿಸಿದ್ದಾರೆ.