ಶ್ರೀರಂಗಪಟ್ಟಣದಲ್ಲಿ ಮರುಕಳಿಸಿದ ದಸರಾ ವೈಭವ

ಶ್ರೀರಂಗಪಟ್ಟಣ: ಈ ಮೊದಲು ಮೈಸೂರು ಸಂಸ್ಥಾನದ‌ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲೇ ನಾಡಹಬ್ಬ ದಸರಾ ವೈಭವಯುತವಾಗಿ ನಡೆಯುತ್ತಿತ್ತು.

ಅಂದು ರಾಜ ಮಹಾರಾಜರ ಆಳ್ವಿಕೆಯ ಸಮಯದಲ್ಲಿ ಶ್ರೀರಂಗಪಟ್ಟಣ ರಾಜಧಾನಿಯಾಗಿತ್ತು.

ಮೈಸೂರಿನಲ್ಲಿ ನಡೆಯುವ ಮಾದರಿಯಲ್ಲೇ ದಸರಾ ಶ್ರೀರಂಗಪಟ್ಟಣದಲ್ಲಿ ಮೊದಲೇ ನಡೆಯುತ್ತಿತ್ತು. ನಂತರ ಶ್ರೀರಂಗಪಟ್ಟಣದಿಂದ ಮೈಸೂರಿಗೆ ಚಿನ್ನದ ಅಂಬಾರಿ  ಸ್ಥಳಾಂತರವಾದಾಗಿನಿಂದ ಸ್ಥಗಿತವಾಯಿತು.

ಆದರೂ ಇಲ್ಲಿ ಇಂದಿಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಲಾಗುತ್ತಿದೆ.

ಶ್ರೀರಂಗಪಟ್ಟಣದಲ್ಲಿ ಈಗಲೂ ದಸರಾ ಬನ್ನಿ ಮಂಟಪ ಎಂಬ ಜಾಗ ಉಳಿದಿದೆ.

2010 ರಿಂದ ಶ್ರೀರಂಗಪಟ್ಟಣದಲ್ಲಿ ದಸರಾ ಪುನರಾರಂಭವಾಗಿದೆ. ದಸರಾ ಶುರುವಾಗಿದ್ದೇ  ಶ್ರೀರಂಗಪಟ್ಟಣದಿಂದ ಎಂಬುದನ್ನು ಇತಿಹಾಸಕಾರರು ಹೇಳುತ್ತಾರೆ‌

ಶ್ರೀರಂಗಪಟ್ಟಣದಲ್ಲಿ ದಸರಾ ವೈಭವ: ಶ್ರೀರಂಗಪಟ್ಟಣದ ಕಿರಂಗೂರಿನ ಬಳಿ ಇರುವ ಬನ್ನಿಮಂಟಪದಲ್ಲಿ ನಾಡ ಅಧಿದೇವತೆಗೆ ಬುಧವಾರ ಮಧ್ಯಾಹ್ನ 2:15ಕ್ಕೆ ಶುಭ ಕುಂಭ ಲಗ್ನದಲ್ಲಿ ಚಾಮುಂಡೇಶ್ವರಿ ಅಮ್ಮನವರಿಗೆ   ಖ್ಯಾತ ಜ್ಯೋತಿಷಿ ವೇದಬ್ರಹ್ಮ ಡಾಕ್ಟರ್ ಬಾನು ಪ್ರಕಾಶ್ ಶರ್ಮ ಗುರುಜಿಯವರು  ಪೂಜೆಯನ್ನು ನೆರವೇರಿಸಿದರು.

ನಂತರ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಮಹಾಸ್ವಾಮಿಗಳವರು ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದರು.

ನಂತರ ಶ್ರೀರಂಗಪಟ್ಟಣದ ರಾಜ ಬೀದಿಯಲ್ಲಿ    ಮಹೇಂದ್ರನ ಮೇಲೆ ಸರ್ವಾಲಂಕಾರ ಭೋಷಿತಳಾದ ತಾಯಿ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಳ್ಳಲು ಜನತೆ ಬಿಸಿಲು, ಮಳೆ ಲೆಕ್ಕಿಸದೆ ಕಾದಿದ್ದರು.

ರಾಜಬೀದಿಯ ರಸ್ತೆ ಮತ್ತು ಮನೆಯ ಮೇಲ್ಚಾವಣಿಗಳ ಮೇಲೆ ನಿಂತು ತಾಯಿಯ ಮೆರವಣಿಗೆ ವೀಕ್ಷಣೆ ಮಾಡುತ್ತಿದ್ದರು.

ಮಹೇಂದ್ರನ ತಂಡ ಅಂಬಾರಿಯನ್ನು ಹೊತ್ತು  ಮೆರವಣಿಗೆಯಲ್ಲಿ ಗಜ ಗಾಂಭೀರ್ಯದಿಂದ  ಸಾಗಿತು. ಸ್ತಬ್ಧ ಚಿತ್ರಗಳು ನಮ್ಮ ಕಲೆ ಸಂಸ್ಕೃತಿ ಬಿಂಬಿಸಿತು.

ಹಳ್ಳಿಯ ಸೊಗಡಿನ ಇನ್ನಿತರ ಚಿತ್ರಗಳು,ಜಾನಪದ ಕಲೆ ಬಿಂಬಿಸುವ ಹುಲಿ ವೇಷ ಡೊಳ್ಳು ಕುಣಿತ ಕಂಸಾಳೆ ಮತ್ತು  ಜನರಿಗೆ ಅರಿವು ಮೂಡಿಸುವಂತಹ ರಸ್ತೆ ಸುರಕ್ಷತೆಯ ಫಲಕಗಳು, ಬಾಲ್ಯ ವಿವಾಹದಿಂದ ಆಗುವ ತೊಂದರೆಗಳು,ಅದನ್ನು ತಡೆಯುವುದನ್ನು ಚಿತ್ರಗಳ ಮೂಲಕ ಬಿಂಬಿಸಿದುದು ವಿಶೇಷ ವಾಗಿತ್ತು.

ಇನ್ನಿತರ ಜಾನಪದ ಸೊಗಡುಗಳು ಜನಮನ ರಂಜಿಸಿತು.