ಕಾಂಗ್ರೆಸ್   ಅಭ್ಯರ್ಥಿ ಆಯ್ಕೆ: ಸ್ಕ್ರೀನಿಂಗ್  ಕಮಿಟಿ ತೀರ್ಮಾನ ಅಂತಿಮ -ಡಿಕೆಶಿ

ಬೆಂಗಳೂರು: ಈ ಬಾರಿಯ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಕುರಿತು ದೆಹಲಿ ನಾಯಕರು ಪ್ರತ್ಯೇಕ ಸಮೀಕ್ಷೆ ನಡೆಸಿದ್ದು, ನಾವೂ ಕೂಡ ಸಮೀಕ್ಷೆ ಮಾಡಿಸಿದ್ದೇವೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸ್ಕ್ರೀನಿಂಗ್ ಕಮಿಟಿ ತೀರ್ಮಾನ ಮಾಡಲಿದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಗುರುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಭೆಯ ನಂತರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.

ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಸವಾಲಾಗಿದೆಯಲ್ಲಾ ಎಂಬ ಪ್ರಶ್ನೆಗೆ, ಯಾವುದೇ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಸವಾಲಾಗಿಲ್ಲ. ನಮಗೆ ಗೆಲುವಿನ ಗುರಿ ಇದೆ.

ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಮತದಾರರು ವಿಶ್ವಾಸ ನೀಡಿರುವುದರಿಂದ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ ಎಂದು ಹೇಳಿದರು.

ಕೆಲವು ಕ್ಷೇತ್ರಗಳಲ್ಲಿ 10, 12, 20 ಅರ್ಜಿಗಳು ಬಂದಿವೆ. ಇಂತಹ ಕಡೆಗಳಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ತ್ಯಾಗ ಮಾಡಲೇಬೇಕು. ಪಕ್ಷ ಅಧಿಕಾರಕ್ಕೆ ಬಂದರೆ ಬೇರೆ, ಬೇರೆ ರೀತಿಯಲ್ಲಿ ಅವರಿಗೆ ಅಧಿಕಾರ ನೀಡಲಾಗುವುದು ಎಂದು ತಿಳಿಸಿದರು.

ಹೀಗಾಗಿ ಪಕ್ಷದ ಟಿಕೆಟ್ ಗೆ ಆಸೆ ಪಟ್ಟು ಅರ್ಜಿ ಹಾಕಿರುವುದರಲ್ಲಿ ತಪ್ಪಿಲ್ಲ. ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ನೀವೆಲ್ಲರೂ ಒಗ್ಗಟ್ಟಿನ ಸಹಕಾರ ನೀಡಬೇಕು ಎಂದು ಎಲ್ಲಾ ಆಕಾಂಕ್ಷಿಗಳಲ್ಲಿ ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.

ಮೊದಲ ಪಟ್ಟಿ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಒಂದು ಹಂತಕ್ಕೆ ಬರಲಿದೆ. ನಂತರ ಕೇಂದ್ರ ಚುನಾವಣಾ ಸಮಿತಿಯು ಪರಿಶೀಲಿಸಿ ಪ್ರಕಟಿಸಲಿದೆ ಎಂದು ಉತ್ತರಿಸಿದರು.

ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದೇ ಎಂದು  ಕೇಳಿದಕ್ಕೆ ಬಿಜೆಪಿ ಸಹಕಾರ ನೀಡದಿದ್ದರೂ ನಮ್ಮ ಶಾಸಕರು ಜನರಮಧ್ಯೆ ನಿಂತು ಕೆಲಸ ಮಾಡಿದ್ದಾರೆ. ಹೀಗಾಗಿ ಬಹುತೇಕ ಎಲ್ಲ ಹಾಲಿ ಶಾಸಕರಿಗೂ ಟಿಕೆಟ್ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.

ಜನಾರ್ದನ ರೆಡ್ಡಿ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾತ್ರೆ ಮಾಡುತ್ತಿರುವುದರ ಬಗ್ಗೆ ಕೇಳಿದಾಗ, ಅವರವರ ಪಕ್ಷದ ವಿಚಾರವಾಗಿ ಯಾರು ಏನಾದರೂ ಮಾಡಿಕೊಳ್ಳಲಿ ಅವರ ಸಿದ್ಧಾಂತ ಬೇರೆ, ನಮ್ಮ ಸಿದ್ಧಾಂತ ಬೇರೆ ಎಂದರು ಡಿ.ಕೆ.ಶಿವಕುಮಾರ್.

ನೀವು ಸಿದ್ದರಾಮಯ್ಯ ಪ್ರತ್ಯೇಕ ಯಾತ್ರೆ ನಡೆಸುತ್ತಿದ್ದೀರಲ್ಲಾ ಎಂದು ಕೇಳಿದಾಗ, ಇದು ಪ್ರತ್ಯೇಕ ಯಾತ್ರೆಯಲ್ಲ. ಜಿಲ್ಲಾ ಹಂತದಲ್ಲಿ ನಾವು ಯಾತ್ರೆ ಮುಗಿಸಿದ್ದು, ಈಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾತ್ರೆ ಮಾಡುತ್ತಿದ್ದೇವೆ ಎಂದು ಡಿಕೆಶಿ ಸ್ಪಷ್ಟಪಡಿಸಿದರು.