ಬೆಂಗಳೂರು: ನಮಗೆ ಸಿಗುತ್ತಿರುವ ಜನ ಬೆಂಬಲದಿಂದ ಬಿಜೆಪಿ ಹಾಗೂ ದಳದವರಿಗೆ ಭೀತಿ ಎದುರಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರು ನಿರಂತರ ಪ್ರವಾಸ ವೇಳಾಪಟ್ಟಿ ನಿಗದಿ ಮಾಡಿಕೊಂಡಿದ್ದಾರೆ. ನಾವು ಇಲ್ಲಿ ಹತ್ತಿರದ ಕ್ಷೇತ್ರಗಳಿಗೆ ಬೆಂಗಳೂರಿನಿಂದ ತೆರಳುತ್ತಿದ್ದೇವೆ. ನಾವು ಎಲ್ಲೆ ಹೋದರೂ ಜನರಿಂದ ಸಿಗುತ್ತಿರುವ ಬೆಂಬಲಕ್ಕೆ ಮಾಧ್ಯಮಗಳ ಕ್ಯಾಮೆರಾಗಳೆ ಸಾಕ್ಷಿ ಎಂದು ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಜಾಧ್ವನಿ ಯಾತ್ರೆಯ ನಂತರ ಶಿವಮೊಗ್ಗ ಜಿಲ್ಲೆಯ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಅಲ್ಲಿಂದ ಹೊಸದುರ್ಗ, ಹೊಳಲ್ಕೆರೆ ಕ್ಷೇತ್ರಗಳಲ್ಲಿ ಯಾತ್ರೆ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ನಂತರ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದೆ. ಅದಕ್ಕಾಗಿ ಎರಡು ಮೂರು ದಿನ ವಿರಾಮ ಇರಲಿದೆ. ನಂತರ ಮಂಡ್ಯ, ಮೈಸೂರು ಜಿಲ್ಲೆಯ ಕ್ಷೇತ್ರಗಳಿಗೆ ಭೇಟಿ ನೀಡುತ್ತೇವೆ ಎಂದು ಹೇಳಿದರು.
ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಕೆಲಸ ಮಾಡಿಕೊಂಡು ಬಂದಿದ್ದೇವೆ. ಇತ್ತೀಚೆಗೆ ಬಿಜೆಪಿ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಘೋಷಣೆ ಮಾಡಿದೆ. ನಾವು ಈ ಯೋಜನೆಗೆ ಹಣ ನೀಡಿದ್ದೇವೆ ಎಂದು ತಿಳಿಸಿದರು.ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬಹುದಾಗಿತ್ತು. ಮೇಕೆದಾಟು ಯೋಜನೆಗೆ ಅನುಮತಿ ನೀಡಬಹುದಿತ್ತು. ಕಾವೇರಿ ನೀರು ಹಂಚಿಕೆ ವಿಚಾರವಾಗಿ ನಾನು ತಾಂತ್ರಿಕ ತಂಡದ ಜತೆ ಸಭೆ ಮಾಡಿದ್ದೇನೆ.

