ಮೈಸೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇನು ಕುರಿಯೆ ಅವರ ತಲೆ ತೆಗೆಯಲು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಚಿವ ಡಾ.ಅಶ್ವಥ್ ನಾರಾಯಣ ವಿರುದ್ಧ ಕಿಡಿಕಾರಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಟಿಪ್ಪು ಸುಲ್ತಾನ್ ಅವರ ತಲೆ ತೆಗೆದಂತೆ ಸಿದ್ದರಾಮಯ್ಯ ಅವರನ್ನು ಹೊಡೆಯಬೇಕು ಎಂಬ ಸಚಿವ ಅಶ್ವತ್ಥ್ ನಾರಾಯಣ ಅವರ ಹೇಳಿಕೆ ಬಗ್ಗೆ ತೀಷ್ಣವಾಗಿ ಅವರು ಪ್ರತಿಕ್ರಿಯಿಸಿದರು.
ಅಶ್ವಥ್ ನಾರಾಯಣ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ ಸಿದ್ದರಾಮಯ್ಯ ಅವರೇನು ಕುರಿಯೇ, ಇತಿಹಾಸದಲ್ಲಿ ಟಿಪ್ಪು ಅವರ ತಲೆ ತೆಗೆದಿರುವ ಬಗ್ಗೆ ದಾಖಲೆ ಎಲ್ಲಿವೆ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.
ನಾನು ಅಶ್ವತ್ಥ್ ನಾರಾಯಣ ಅವರಿಗೆ ಉತ್ತರವನ್ನೂ ನೀಡುವುದಿಲ್ಲ, ಅವರ ಹೇಳಿಕೆಯನ್ನು ಖಂಡಿಸಲೂ ಹೋಗುವುದಿಲ್ಲ, ಅವರ ಹೇಳಿಕೆಗೆ ಬೊಮ್ಮಾಯಿ, ಯಡಿಯೂರಪ್ಪನವರು ಹಾಗೂ ಜೆ.ಪಿ. ನಡ್ಡಾ ಅವರು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ನಾನು ಅಶ್ವಥ್ ನಾರಾಯಣ ಬಗ್ಗೆ ಮಾತನಾಡಿ ನನ್ನ ಬಾಯಿ ಕೊಳಕು ಮಾಡಿಕೊಳ್ಳಲು ಇಚ್ಛಿಸುವುದಿಲ್ಲ. ಇನ್ನು ಟಿಪ್ಪು ಅವರ ವಿಚಾರದಲ್ಲಿ ರಾಷ್ಟ್ರಪತಿಗಳು ಬಂದು ಏನು ಮಾತನಾಡಿದ್ದಾರೆ ಎಂಬ ದಾಖಲೆಗಳಿವೆ ಎಂದರು ಡಿಕೆಶಿ.
ಬಿಜೆಪಿ ಬರೀ ಸುಳ್ಳಿನ ಸರಮಾಲೆ ಹೆಣೆದಿದೆಯೆ ಹೊರತು ಮೂರುವರೆ ವರ್ಷದಲ್ಲಿ ಅದರ ಸಾಧನೆ ಏನೇನೂ ಇಲ್ಲ ಎಂದು ಇದೇ ವೇಳೆ ಡಿ.ಕೆ. ಶಿವಕುಮಾರ್ ಟೀಕಿಸಿದರು
ಬಿಜೆಪಿ ಪ್ರಣಾಳಿಕೆಯ ಶೇ.90 ರಷ್ಟನ್ನು ಈಡೇರಿಸಲಿಲ್ಲ.ಮೂರುವರೆ ವರ್ಷದಲ್ಲಿ ಅವರು ಏನು ಸಾಧನೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಯಡಿಯೂರಪ್ಪನವರು ಹಸಿರು ಟವಲ್ ಹಾಕಿಕೊಂಡು ಬಜೆಟ್ ಮಂಡಿಸಿದ್ದರು. ಏನು ಪ್ರಯೋಜನ ಆಯಿತು.
ಬಿಜೆಪಿಗೆ 170 ಪ್ರಶ್ನೆ ಕೇಳಿದ್ದೇವೆ. ಒಂದು ಪ್ರಶ್ನೆಗೂ ಉತ್ತರ ಬಂದಿಲ್ಲ.ಸುಳ್ಳಿಗೂ ಒಂದು ಲೆಕ್ಕ ಇರಬೇಕು.
ಆದರೆ ಅವರಿಗೆ ಆ ಲೆಕ್ಕವೂ ಇಲ್ಲ ಎಂದು ಛೇಡಿಸಿದರು.
ಬಿಜೆಪಿಯದು ಬರೀ ವಂಚನೆ. ಅಧಿಕಾರದಲ್ಲಿ ಮುಂದುವರೆಯಲು ಅವರಿಗೆ ಅರ್ಹತೆ ಇಲ್ಲ
ಎಂದು ಹೇಳಿದರು.
ಮಾರ್ಚ್ 7 ಅಥವಾ 8 ಕ್ಕೆ ಚುನಾವಣಾ ನೀತಿ ಸಂಹಿತೆ ಘೋಷಣೆಯಾಗಲಿದೆ, ಫೆ.17ರಂದು ಮಂಡಿಸುವ ಬಜೆಟ್ ಕೇವಲ ಚುನಾವಣಾ ಪ್ರಣಾಳಿಕೆ ಬಜೆಟ್ ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ಡಿಕೆಶಿ ಟೀಕಿಸಿದರು.
ಡಬಲ್ ಇಂಜಿನ್ ಸರಕಾರದಲ್ಲಿ ಹೊಗೆ ಬಂತೇ ಹೊರತು ಇಂಜಿನ್ ಮುಂದಕ್ಕೆ ಹೋಗಲಿಲ್ಲ.ಸರ್ಕಾರದ ಇಂಜಿನ್ ಸ್ಟಾರ್ಟ್ ಆಯ್ತೆ ಹೊರತು ಮುಂದಕ್ಕೆ ಹೋಗಲೇ ಇಲ್ಲ ಎಂದು ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.

