ಶಿವ ಕೇಶವರಲ್ಲಿ ಭೇದವಿಲ್ಲ ಇಬ್ಬರು ಒಬ್ಬರೇ -‌ಗಣಪತಿ‌ ಸಚ್ಚಿದಾನಂದ ಸ್ವಾಮೀಜಿ

ಮೈಸೂರು: ಅವಧೂತ ದತ್ತ ಪೀಠ,ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಶಿವನ ಆರಾಧನೆ ನಡೆಯುತ್ತಿವೆ.

ಈ ವೇಳೆ‌ ಭಕ್ತರನ್ನು ಉದ್ದೇಶಿಸಿ ಶ್ರೀ ‌ಗಣಪತಿ‌ ಸಚ್ಚಿದಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು.

ಓಂ ನಮಃ ಶಿವಾಯ, ಹರಿ ಓಂ ಎಂದು  ಪ್ರಾರ್ಥಿಸಿ ಮಾತು ಪ್ರಾರಂಭಿಸಿದ ಸ್ವಾಮೀಜಿಯವರು ಜನ್ಮಕೊಂದು ಶಿವರಾತ್ರಿ ಎಂದು ಹೇಳುತ್ತಾರೆ ಹಾಗಾದರೆ ಜನ್ಮಕ್ಕೆ ಒಮ್ಮೆಯೇ ಶಿವನನ್ನು ಪೂಜಿಸಬೇಕು ಎಂಬ ಅರ್ಥವಲ್ಲ ಎಂದು ಹೇಳಿದರು.

ಶಿವ ಜ್ಞಾನದಾತ ಅವನು ಎಲ್ಲರಿಗೂ ಜ್ಞಾನವನ್ನು ನೀಡುವವನು. ಶಿವರಾತ್ರಿಯ ದಿನ ಉಪವಾಸ ಮಾಡಿ ಜಗರಣೆ ಮಾಡುತ್ತಾ ಶಿವನ ಬಳಿ ಇದ್ದು ಜ್ಞಾನ ಸಂಪಾದಿಸಬೇಕು ಎಂದು ತಿಳಿಸಿದರು.

ಶಿವ ಎಲ್ಲರಿಗೂ ಗುರು. ಆ ಪಾರ್ವತಿಗೇ ಗುರು ಆಗಿದ್ದವನು.ಆತ ಇಡೀ ಬ್ರಹ್ಮಾಂಡವನ್ನು ವ್ಯಾಪಿಸಿಕೊಂಡಿರುವವನು.

ಒಮ್ಮೆ ಬ್ರಹ್ಮ ಮತ್ತು ವಿಷ್ಣು ಇಬ್ಬರಿಗೂ ಜಗಳ ಆದಾಗ ಒಬ್ಬರು ಶಿವನ ಮೂಲ ನೋಡಬೇಕು ಎಂದು ಹೇಳಿದರೆ ಮತ್ತೊಬ್ಬರು ಇಲ್ಲ ನಾನು ಶಿವನ ತಲೆ ನೋಡಬೇಕು ಎಂದು ಹಠ ಹಿಡಿದು ಪ್ರಯಾಣಿಸುತ್ತಾರೆ.

ಯುಗಗಳೇ ಕಳೆಯುತ್ತದೆ, ಆದರೆ ಇಬ್ಬರಿಗೂ ಶಿವನ ತಲೆಯನ್ನೂ ನೋಡಲಾಗಲಿಲ್ಲ ಪಾದವನ್ನು ನೋಡಲಾಗಲಿಲ್ಲ ಸೋಲಪ್ಪಿಕೊಳ್ಳುತ್ತಾರೆ.

ಆದರೆ ಬ್ರಹ್ಮ ನಾನು ಶಿವನನ್ನು ನೋಡಿದೆ ಎಂದು ಹೇಳುತ್ತಾರೆ. ಅದು ಹೇಗೆ ಎಂದು ಕೇಳಿದಾಗ ಮೇಲಿಂದ ಕೇದಗೆ ಹೂವು ಬರುತ್ತಿದೆ ಅದು ಶಿವನ ತಲೆಯಿಂದಲೇ ಬರುತ್ತಿದೆ ಹಾಗಾಗಿ ನಾನು ಶಿವನನ್ನು ನೋಡಿದೆ ಎಂದು ಹೇಳುತ್ತಾನೆ.

ಆಗ ಶಿವನೇ ಪ್ರತ್ಯಕ್ಷನಾಗಿ ಕೇದಗೆ ಹೂವನ್ನು ನೀನು ನನ್ನ ತಲೆಯನ್ನು ನೋಡಿದೆಯಾ ಎಂದು ಕೇಳುತ್ತಾನೆ ಆಗ ಅಲ್ಲಿ ಗೋವು ಕೂಡ ಬರುತ್ತದೆ ಅದನ್ನೂ ಕೇಳುತ್ತಾನೆ ನನ್ನನ್ನು ನೋಡಿದೆಯಾ ಎಂದು ಆಗ ಹೂ ಮತ್ತು ಗೋವು ಸುಳ್ಳು ಹೇಳಿದ್ದು ಗೊತ್ತಾಗುತ್ತದೆ.

ಆಗ ಶಿವ ನನ್ನ ತಲೆಯನ್ನು ನಿಮಗೆ ನೋಡುವುದಕ್ಕೆ ಆಗುವುದಿಲ್ಲ ಯಾಕೆಂದರೆ ನಾನು ಇಡೀ ಬ್ರಹ್ಮಾಂಡವನ್ನು ಆವರಿಸಿಕೊಂಡಿದ್ದೇನೆ ಎಂದು ತಿಳಿಸುತ್ತಾನೆ.

ಹಾಗಾಗಿ ಶಿವನಿಂದ ಜ್ಞಾನವನ್ನು ಪಡೆಯಬೇಕಾದರೆ ಶಿವರಾತ್ರಿ ದಿನ ಉಪವಾಸವಿದ್ದು ಜಾಗರಣೆ ಮಾಡುತ್ತಾ ಶಿವಧ್ಯಾನದಲ್ಲಿ ತೊಡಗುವುದೇ ಲೇಸು, ಸರಿಯಾಗಿ ರಾತ್ರಿ ಹನ್ನೆರಡು ಗಂಟೆಗೆ ಸ್ವಾಮಿ ದರ್ಶನ ಕೊಡುತ್ತಾರೆ.

ಶಿವ ಕೇಶವರಲ್ಲಿ ಭೇದವಿಲ್ಲ ಇಬ್ಬರು ಒಬ್ಬರೇ ಹಾಗಾಗಿ ನಾವು ಶಿವಧ್ಯಾನವನ್ನು ಮಾಡೋಣ ಎಂದು ಹೇಳಿದರು.

ಈ ಶಿವರಾತ್ರಿ ಸಂದರ್ಭದಲ್ಲಿ ಒಳ್ಳೆಯ ಮಳೆ, ಬೆಳೆ ಆಗಲಿ, ಬೆಳೆ ಕೈಗೆ ಸಿಗುವಂತಾಗಲಿ,ನಾಡು ಸುಭಿಕ್ಷವಾಗಲಿ,ಪ್ರಜೆಗಳಿಗೆ,ಪ್ರಜಾಪ್ರತಿನಿಧಿಗಳಿಗೆ,ಪ್ರಜೆಗಳಿಂದ ಆರಿಸಿ ಬಂದವರಿಗೆ ಭಗವಂತ ಒಳ್ಳೆಯ ಮನಸ್ಸು ಕೊಡಲಿ.ಕರ್ನಾಟಕ ಸೇರಿದಂತೆ ಇಡೀ ಪ್ರಪಂಚಕ್ಕೆ ಶಿವನ ಕೃಪೆಯಿಂದ ಒಳ್ಳೆಯದಾಗಲಿ ಎಂದು ಗಣಪತಿ ಶ್ರೀಗಳು ಹಾರೈಸಿದರು.