ಜುಲೈನಿಂದಲೇ ಉಚಿತ ವಿದ್ಯುತ್ -ಸಿದ್ದರಾಮಯ್ಯ ಭರವಸೆ

ಬೆಂಗಳೂರು: ಗೃಹಜ್ಯೋತಿ ಯೋಜನೆ ತಕ್ಷಣದಿಂದಲೇ ಪ್ರಾರಂಭವಾಗುತ್ತಿದ್ದು, ಈ ತಿಂಗಳಿಂದಲೇ ಉಚಿತ ವಿದ್ಯುತ್ ನೀಡಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಖಚಿತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ಗೃಹಜ್ಯೋತಿ ಯೋಜನೆಯ ಬಿಲ್ ಆಗಸ್ಟ್ ತಿಂಗಳಲ್ಲಿ ನೀಡಲಾಗುವುದು. ಅನ್ನಭಾಗ್ಯದ ಹಣ ಈ ತಿಂಗಳು 10 ರ ನಂತರ ಪ್ರಾರಂಭ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಜುಲೈ ತಿಂಗಳಲ್ಲಿ ಅಕ್ಕಿ ಬದಲಿಗೆ ಹಣವನ್ನು ಒಂದನೇ ತಾರೀಖು ಕೊಡುತ್ತೇವೆ ಎಂದು ಹೇಳಿಲ್ಲ. ಈ ತಿಂಗಳ ಹಣವನ್ನು ಈ ತಿಂಗಳಲ್ಲಿಯೇ ನೀಡಲಾಗುವುದು ಎಂದು ಹೇಳಿದರು.

ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಭೆ ನಡೆಯುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರ ಒಳಜಗಳವನ್ನು ಮೊದಲು ಸರಿಪಡಿಸಿಕೊಳ್ಳಲಿ ಎಂದು ತಿಳಿಸಿದರು.

ಗೃಹಜ್ಯೋತಿ ಯೋಜನೆಯಲ್ಲಿ 200 ಯುನಿಟ್‍ಗಿಂತ ಕಡಿಮೆ ವಿದ್ಯುತ್ ಬಳಸುವ ಗ್ರಾಹಕರಿಗೆ ಶುಲ್ಕ ವಿನಾಯಿತಿ ದೊರೆಯಲಿದೆ.

ಅರ್ಜಿ ಸಲ್ಲಿಕೆಗೆ ಇದೇ ತಿಂಗಳ 18ರಿಂದ ಅವಕಾಶ ನೀಡಲಾಗಿದೆ. ಈವರೆಗೂ ಸುಮಾರು 86 ಲಕ್ಷಕ್ಕೂ ಹೆಚ್ಚು ಗ್ರಾಹಕರು ಗೃಹಜ್ಯೋತಿ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ.