ಬೆಂಗಳೂರು: ರಾಜ್ಯದ ಜನತೆಗೆ ಐದು ಅಂಶಗಳ ಗ್ಯಾರಂಟಿ ನೀಡಿದ್ದ ಕಾಂಗ್ರೆಸ್ ಪಕ್ಷವು, ಅಧಿಕಾರಕ್ಕೆ ಬಂದ ಮೇಲೆ ಕಾಸಿಗಾಗಿ ಪೋಸ್ಟಿಂಗ್ ಗ್ಯಾರಂಟಿ ನೀಡಲು ಹೊರಟಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲ ಇಲಾಖೆಗಳಲ್ಲಿ ವರ್ಗಾವಣೆಗೆ ದರ ನಿಗದಿ ಆಗಿದೆ ಎಂದು ಕುಟುಕಿದರು.
ಹಾದಿಬೀದಿಯಲ್ಲಿ ಜನರು ಆಡಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಯಾವುದೋ ಒಂದು ಇಲಾಖೆಯಲ್ಲಿ ನಿಗದಿ ಮಾಡಿರುವ ವರ್ಗಾವಣೆಯ ದರಪಟ್ಟಿ ನನ್ನ ಕೈಯ್ಯಲ್ಲಿ ಇದೆ. ಅದನ್ನು ಯಾರೋ ನನಗೆ ತಂದು ಈ ವಿವರ ನೀಡಿದ್ದಾರೆ ಎಂದು ಪಟ್ಟಿಯನ್ನು ಪ್ರದರ್ಶಿಸಿದರು.
ಬೇಕಿದ್ದರೆ ಇದನ್ನು ಸಭಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳಿಗೆ ಕಳಿಸಿಕೊಡುತ್ತೇನೆ ಎಂದು ಹೇಳಿದರು.
ನಾನು ಯಾವುದೇ ಸಹನೆಯನ್ನು ಕಳೆದುಕೊಂಡಿಲ್ಲ, ದ್ವೇಷವನ್ನೂ ಮಾಡುತ್ತಿಲ್ಲ ಮತ್ತೆ ಹೆಡೆ ಎತ್ತಿದೆ ವರ್ಗಾವಣೆ ಮಾಫಿಯಾ. ನಾನು ಒಂದು ಗಿರಾಕಿಯ ಕರ್ಮಕಾಂಡವನ್ನು ಇಲ್ಲಿ ಹೇಳುತ್ತೇನೆ, ಅವರ ಹೆಸರು ಹೇಳುವುದಿಲ್ಲ, ಇದನ್ನು ಸ್ಪೀಕರ್ ಮತ್ತು ಸಿಎಂ ಅವರಿಗೆ ಕಳಿಸುತ್ತೇನೆ, ಎಷ್ಟೆಷ್ಟು ದರ ನಿಗದಿ ಮಾಡ್ಕೊಂಡಿದ್ದಾರೆಂದು ಇಲ್ಲಿದೆ ಎಂದು ತಿಳಿಸಿದರು.
ಈ ಹಿಂದೆ ಇದೇ ಕಾಂಗ್ರೆಸ್ ಪಕ್ಷ ಹಿಂದಿನ ಬಿಜೆಪಿ ಸರಕಾರದ ವಿರುದ್ಧ ವರ್ಗಾವಣೆಯ ರೇಟ್ ಕಾರ್ಡ್ ಹೊರಡಿಸಿತ್ತು ಎನ್ನುತ್ತಾ ಕುಮಾರಸ್ವಾಮಿ ಅವರು ಹಿಂದಿನ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಪಕ್ಷವು ಮಾಧ್ಯಮಗಳಲ್ಲಿ ನೀಡಿದ್ದ ಹಗರಣಗಳ ರೇಟ್ ಕಾರ್ಡ್ ಜಾಹೀರಾತನ್ನೂ ಪ್ರದರ್ಶಿಸಿದರು.
ಹಿಂದೆ ನೀವು ಬಿಜೆಪಿ ಸರಕಾರದ ವಿರುದ್ಧ ರೇಟ್ ಕಾರ್ಡ್ ಜಾಹೀರಾತು ಹಾಕಿದ್ದೀರಿ. ಮುಂದೆ ನಿಮ್ಮ ವಿರುದ್ಧ ರೇಟ್ ಕಾರ್ಡ್ ಜಾಹೀರಾತು ಹೊರಡಿಸಬೇಕಾಗುತ್ತದೆ. ಈಗಲೇ ಎಚ್ಚೆತ್ತುಕೊಂಡು ಸರಿ ಮಾಡಿಕೊಳ್ಳಲಿ ಎಂಬ ಸದುದ್ದೆಶದಿಂದ ಹೇಳುತ್ತಿದ್ದೇನೆ ಎಂದು ಎಚ್ ಡಿ ಕೆ ಹೇಳಿದರು.
ನಿಮ್ಮ ಗ್ಯಾರಂಟಿಗಳನ್ನು ನಾನು ವಿರೋಧ ಮಾಡುವುದಿಲ್ಲ. ಸ್ವಾಗತ ಮಾಡುತ್ತೇನೆ, ನೀವು ನುಡಿದಂತೆ ನಡೆಯುತ್ತಿಲ್ಲ ಎಂದು ಹೇಳುತ್ತಿಲ್ಲ, ನಡೆಯಲು ಪ್ರಯತ್ನ ಮಾಡುತ್ತಿದ್ದೀರಿ. ಆದರೆ ನುಡಿದಂತೆ ಪೂರ್ಣವಾಗಿ ನಡೆಯಲು ನಿಮ್ಮಿಂದ ಆಗುತ್ತಿಲ್ಲ.
ಈ ಗ್ಯಾರಂಟಿಗಳ ಸೈಡ್ ಎಫೆಕ್ಟ್ ಗಳ ಬಗ್ಗೆ ಏನು ಮಾಡಿದ್ದಿರಿ ಈ ಬಗ್ಗೆ ನೀವು ಚಿಂತನೆಯನ್ನೇ ಮಾಡಿಲ್ಲ. ಗ್ಯಾರಂಟಿಗಳ ಬಾಧೆಗೆ ತುತ್ತಾದವರಿಗೆ ನೀವು ಏನಾದರೂ ಒಳ್ಳೆಯದು ಮಾಡಬೇಕಲ್ಲವೆ ಎಂದು ಅವರು ಹೇಳಿದರು.
ಗೃಹಜ್ಯೋತಿ ಅಂತ ಮಾಡಿದ್ದೀರಿ. ಆದರೆ, 200 ಯೂನಿಟ್ ಉಚಿತ ಎಂದವರು ಈಗ ಸರಾಸರಿ ಲೆಕ್ಕ ಹೇಳಿಕೊಂಡು ಜನರಿಗೆ ಹೊರೆ ಹಾಕುತ್ತಿದ್ದೀರಿ.
ಹಿಂದೆ ವಿದ್ಯುತ್ ಖರೀದಿ ಬಗ್ಗೆ ತನಿಖೆ ಮಾಡಲು ಸದನ ಸಮಿತಿ ರಚನೆ ಮಾಡಿದ್ದೀರಿ. ಆ ಸಮಿತಿ ಹಣೆಬರಹ ಏನಾಯಿತು ಎನ್ನುವುದು ಗೊತ್ತಿದೆ, ಉಪ ಮುಖ್ಯಮಂತ್ರಿ ಅವರಿಗೆ ಎಲ್ಲವೂ ಚೆನ್ನಾಗಿ ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ದುಬಾರಿ ದರಕ್ಕೆ ಸೋಲಾರ್ ವಿದ್ಯುತ್ ಖರೀದಿ ಪ್ರಕರಣ ಪ್ತಸ್ತಾಪಿಸಿದ ಕುಮಾರಸ್ವಾಮಿ, ಸೋಲಾರ್ ಪಿಪಿಎಸ್ ವಿಚಾರದಲ್ಲಿ ಅಕ್ರಮದ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.
ಶಕ್ತಿ ಯೋಜನೆಯಿಂದ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿದ್ದೀರಿ, ಸಂತೋಷ. ಹಾಗೆಯೇ ಪುರುಷರಿಗೂ ಫ್ರೀ ಸೌಲಭ್ಯ ಕೊಡಿ. ಅವರೇನು ಪಾಪ ಮಾಡಿದ್ದಾರೆ, ಅವರು ಕಾಂಗ್ರೆಸ್ ಪಕ್ಷಕ್ಕೆ ವೋಟು ಕೊಟ್ಟಿಲ್ಲವೇ ಎಂದು ಇದೇ ವೇಳೆ ಸರ್ಕಾರಕ್ಕೆ ಮೊಟಕಿದರು.
ಶಕ್ತಿ ಯೋಜನೆಯಿಂದ ತೊಂದರೆಗೆ ಒಳಗಾಗಿರುವ ಖಾಸಗಿ ಬಸ್ ಮಾಲೀಕರು, ಚಾಲಕರಿಗೆ, ಆಟೋ ಚಾಲಕರಿಗೇ ಏನು ಮಾಡಬೇಕು ಎಂಬುದರ ಬಗ್ಗೆ ಸರ್ಕಾರ ಯೋಚನೆ ಮಾಡಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.

