ಎಚ್.ಡಿ. ಕುಮಾರಸ್ವಾಮಿ ‌ಅವರೇ ವಿಪಕ್ಷ  ನಾಯಕ -ಸವದಿ

ಬೆಂಗಳೂರು: ಸ್ವಲ್ಪ ದಿನ ಸುಮ್ಮನಿರಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕರಾಗಿ  ಕೆಲಸ ನಿರ್ವಹಿಸುತ್ತಾರೆ ಎಂದು ಶಾಸಕ ಲಕ್ಷ್ಮಣ ಸವದಿ‌ ಹೇಳಿದರು.

ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರು ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಕುರಿತು ಮಾತನಾಡುತ್ತಿದ್ದರು.

ಆಗ‌ ಅವರು ಬಿಜೆಪಿಯವರು ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಏಕೆ ಕೆಳಗಿಳಿಸಿದರು ಎಂಬುದು ಗೊತ್ತಿಲ್ಲ.

ಬಹುಶಃ ಲಕ್ಷ್ಮಣ್ ಸವದಿ ಅವರಿಗೆ ಮಾಹಿತಿ ಇರಬಹುದು, ಇನ್ನು ಬಿಜೆಪಿಯವರು ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಿಕೊಂಡಿಲ್ಲ ಎಂದು ಲೇವಡಿ ಮಾಡಿದರು.

ಆ ವೇಳೆ ಮಧ್ಯಪ್ರವೇಶಿಸಿದ ಲಕ್ಷ್ಮಣ ಸವದಿಯವರು ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ವಿಷಯ ಕುರಿತು ನನಗಿಂತಲೂ ಜಿ.ಟಿ.ದೇವೇಗೌಡರಿಗೆ ಹೆಚ್ಚಿನ ಮಾಹಿತಿ ಇದೆ. ಆದರೆ ಅದನ್ನು ಹೇಳುತ್ತಿಲ್ಲ ಎಂದು ತಿರುಗೇಟು ನೀಡಿದರು.

ಇನ್ನು ಸ್ವಲ್ಪ ದಿನ ಸುಮ್ಮನಿರಿ, ವಿರೋಧ ಪಕ್ಷದ ನಾಯಕನ ಸ್ಥಾನ ನಿಮ್ಮ ಮನೆ ಬಾಗಿಲಿಗೇ ಬರುತ್ತದೆ. ಬಿಜೆಪಿಯಲ್ಲಿ ಕಚ್ಚಾಟ‌ ನಡೆಯುತ್ತಿದ್ದು, ಯಾರಿಗೂ ವಿಪಕ್ಷ ನಾಯಕನ ಸ್ಥಾನ ಸಿಗುವುದಿಲ್ಲ.

ಹಾಗಾಗಿ ಸದನದಲ್ಲಿ ವಿಪಕ್ಷ ನಾಯಕನ ಕುರ್ಚಿಯ ಮೇಲೆ ಯಾರೂ ಕುಳಿತುಕೊಳ್ಳುತ್ತಿಲ್ಲ ಎಂದು ಟೀಕಿಸಿದರು.

ಕುಮಾರಸ್ವಾಮಿಯವರೇ ವಿರೋಧ ಪಕ್ಷದ ನಾಯಕನಾಗಿ ಒಳ್ಳೆಯ ಕೆಲಸ ಮಾಡುತ್ತಾರೆ. ಆ ಮೇಲೆ ಬಿಜೆಪಿಯವರಿಗೆ ಬಿಟ್ಟುಕೊಡುತ್ತಾರೆ.

ನಂತರ ಎರವಲು ಸೇವೆಯ ಮೇಲೆ ವಿಪಕ್ಷ ನಾಯಕನ ಸ್ಥಾನ ಬಿಟ್ಟುಕೊಡುತ್ತಾರೆ ಎಂದು  ಸವದಿ ಲೇವಡಿ ಮಾಡಿದರು.

ಈ ವೇಳೆ ಮಾಜಿ ಸಚಿವ ಎಚ್.ಡಿ.ರೇವಣ್ಣ, ಲಕ್ಷ್ಮಣ್ ಸವದಿ ಅವರನ್ನು ಬಿಜೆಪಿಯಿಂದ ಆಚೆ ಕಳುಹಿಸಿದ್ದು ಯಾರು ಎಂದು ಪ್ರಶ್ನಿಸಿದರು. ಅದಕ್ಕೆ ಸವದಿ ಯಾವುದೇ ಉತ್ತರ ನೀಡದೇ ಮೌನಕ್ಕೆ ಶರಣಾದರು.