ಮೈಸೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತದೆ ಎಂದು ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾನೂನನ್ನು ಗಂಟು ಮೂಟೆ ಕಟ್ಟಿಡಲಾಗಿದೆ ಎಂದು ಕಿಡಿ ಕಾರಿದರು.
ಮೈಸೂರಿನಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಕೊಲೆ, ದೌರ್ಜನ್ಯ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯ ಮಂತ್ರಿಗಳ ಕ್ಷೇತ್ರದಲ್ಲೇ ಕಾನೂನು ಸುವ್ಯವಸ್ಥೆ ಹದೆಗಟ್ಟಿದೆ ಅಂದ ಮೇಲೆ ರಾಜ್ಯದ ಬೇರೆ ಭಾಗಗಳ ಪರಿಸ್ಥಿತಿ ಹೇಗಿರಬೇಡ ಎಂದು ಹೇಳಿದರು.
ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ, ಸ್ವಾಮೀಜಿಗಳಿಗೆ, ಹಿರಿಯ ನಾಗರೀಕರಿಗೆ ರಕ್ಷಣೆ ಇಲ್ಲ. ಕಾಂಗ್ರೆಸ್ ಸರಕಾರ ಬಂದಾಗಲೆಲ್ಲ ರಾಜ್ಯದ ಒಳಗಿನ ಜಿಹಾದಿ ಮನಃಸ್ಥಿತಿ ಇರೋ ಜನ ಎದ್ದು ಕೂರುತ್ತಾರೆ ಎಂದು ದೂರಿದರು.
ವೇಣುಗೋಪಾಲ ನಾಯಕ ಕೊಲೆ ಪೂರ್ವ ನಿಯೋಜಿತ, ಜಿಹಾದಿ ಮನಃಸ್ಥಿತಿ ಜನ ಪ್ಲಾನ್ ಮಾಡಿಕೊಂಡು ಹಿಂದೂಗಳ ಕೊಲೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರಕಾರಕ್ಕೆ ಈ ಕೊಲೆಗಳ ವಿಚಾರದಲ್ಲಿ ಗಂಭೀರತೆ ಇಲ್ಲ ಎಂದು ಕಿಡಿಕಾರಿದರು.
ವೇಣುಗೋಪಾಲ ನಾಯಕ ಹತ್ಯೆ ನಂತರ ಅವರ ಕುಟುಂಬಕ್ಕೆ ಸ್ಪಂದಿಸುವ ಕೆಲಸವನ್ನು ಜಿಲ್ಲಾ ಮಂತ್ರಿ ಮಾಡಿಲ್ಲ. ಸಿಎಂ ಸಮೇತ ಎಲ್ಲರು ಕಣ್ಮುಂಚಿ ಕುಳಿತಿದ್ದಾರೆ ಎಂದು ಟೀಕಿಸಿದರು.
ಪೋಲಿಸ್ ತನಿಖೆಗೆ ಒತ್ತಡಗಳು ಉಂಟಾಗುವ ಅನುಮಾನ ಇದೆ, ಅದ್ದರಿಂದ ಸಿಬಿಐ ತನಿಖೆ ಮಾಡಲಿ ಎಂದು ಹೇಳಿದರು.
ಜೈನ ಮುನಿ ಕೊಲೆ ಸಿಬಿಐಗೆ ನೀಡಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ನಮ್ಮ ಪೋಲಿಸರು ಸಮರ್ಥರಿದ್ದಾರೆ. ಆದರೆ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇದೆ ಅನುಮಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ 40 ಕೊಲೆಗಳಾಗಿವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದು ಶ್ರೀರಾಮುಲು ಆತಂಕ ವ್ಯಕ್ತಪಡಿಸಿದರು.

