ಬೆಂಗಳೂರು: ರೈತರ ಜಮೀನಿನ ಮೇಲೆ ಬುಲ್ಡೋಜರ್ ಓಡಿಸಿ, ರಿಯಲ್ ಎಸ್ಟೇಟ್ ಸಾಮ್ರಾಜ್ಯ ಕಟ್ಟಲು ಹೊರಟಿರುವ ಡಿ.ಕೆ.ಶಿವಕುಮಾರ್ ಅವರೇ, ಅನ್ನದಾತರ
ಆಕ್ರೋಶದ ಜ್ವಾಲೆಯಲ್ಲಿ ನಿಮ್ಮ ಕಾಂಗ್ರೆಸ್ ಸರ್ಕಾರ ಭಸ್ಮವಾದೀತು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಸಿದ್ದಾರೆ.
ಸುಮಾರು 470 ದಿನಗಳಿಂದ ಅನ್ನದಾತರು ನಡೆಸುತ್ತಿರುವ ಹೋರಾಟ, ಕಣ್ಣೀರು ಮತ್ತು ಆಕ್ರೋಶವನ್ನು ಲೆಕ್ಕಿಸದೆ, ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ 499 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕಬಳಿಸಲು ಅಂತಿಮ ಅಧಿಸೂಚನೆ ಹೊರಡಿಸಿರುವುದು ನಿಮ್ಮ ಸರ್ಕಾರದ ನಿಜವಾದ ಮುಖವನ್ನು ಬಯಲು ಮಾಡಿದೆ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳೇ, ರಾಜ್ಯದ ರೈತರನ್ನು ನೀವು ದುರ್ಬಲರೆಂದು ಭಾವಿಸಿದ್ದರೆ ಅದು ನಿಮ್ಮ ದೊಡ್ಡ ತಪ್ಪು! ಇನ್ನು ಕೇವಲ ಒಂದೂವರೆ ವರ್ಷದಲ್ಲಿ ನಿಮ್ಮ ಈ ಜನವಿರೋಧಿ ಸರ್ಕಾರ ಇತಿಹಾಸದ ಪುಟ ಸೇರಲಿದೆ ಎಂದು ಅಶೋಕ್ ಭವಿಷ್ಯ ನುಡಿದಿದ್ದಾರೆ.
2028ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಈ ಇಡೀ ಅಕ್ರಮ ಭೂಸ್ವಾಧೀನ ಪ್ರಕ್ರಿಯೆಯನ್ನು ಅಧಿಕೃತವಾಗಿ ರದ್ದುಪಡಿಸಲಾಗುವುದು ರೈತರಿಗೆ ಕೊಟ್ಟಿರುವ ಮಾತನ್ನು ನಾವು ಖಂಡಿತ ಉಳಿಸುತ್ತೇವೆ ಎಂದು ತಿಳಿಸಿದ್ದಾರೆ.
ರೈತರ ತೀವ್ರ ವಿರೋಧದ ನಡುವೆಯೂ ಇಷ್ಟೊಂದು ಆತುರಾತುರವಾಗಿ ಭೂಮಿ ಕಬಳಿಸಲು ಹೊರಟಿರುವುದರ ಹಿಂದಿನ ಅಸಲಿ ರಹಸ್ಯವೇನು ನಿಮ್ಮ ಬಿಲ್ಡರ್ ಮಾಫಿಯಾದ ಜೇಬು ತುಂಬಿಸುವ ರಿಯಲ್ ಎಸ್ಟೇಟ್ ಅಜೆಂಡಾ ಇದಕ್ಕೆ ಕಾರಣ ಅಲ್ಲವೆ ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಕಸದ ಟೆಂಡರ್‌ನಲ್ಲೂ ಸಾವಿರಾರು ಕೋಟಿ ಕಮಿಷನ್ ವಾಸನೆ ಹೊಡೆದ ಈ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ, ಈಗ ಅನ್ನದಾತರ ಜಮೀನಿನಲ್ಲೂ ರಿಯಲ್ ಎಸ್ಟೇಟ್ ಬಂಗಾರ ಹುಡುಕಲು ಹೊರಟಿದೆ.
ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ಆಡಳಿತದಲ್ಲಿ ಸಿಎಂ ಎಂದರೆ ಚೀಫ್ ಮಿನಿಸ್ಟರ್ ಅಲ್ಲ, ಅದು ಕಮಿಷನ್ ಮಿನಿಸ್ಟರ್,ಕರಪ್ಷನ್ ಮಿನಿಸ್ಟರ್ ಎಂದು ಪ್ರತಿಪಕ್ಷ ನಾಯಕ ಕಾಲೆಳೆದಿದ್ದಾರೆ.
ಅನ್ನದಾತರ ಹೊಟ್ಟೆಗೆ ಹೊಡೆದು ಕಟ್ಟುವ ಯಾವುದೇ ಟೌನ್‌ಶಿಪ್ ಅಭಿವೃದ್ಧಿಯಲ್ಲ, ಅದು ರೈತರ ಭವಿಷ್ಯದ ಸಮಾಧಿ!
ಈ ಹೋರಾಟ ಕೇವಲ 499 ಎಕರೆ ಜಮೀನಿಗಾಗಿ ಅಲ್ಲ; ಇದು ರೈತರ ಹಕ್ಕು, ಗೌರವ ಮತ್ತು ಬದುಕಿನ ಹೋರಾಟ. ಸರ್ಕಾರ ಕೂಡಲೇ ಈ ಭೂಸ್ವಾಧೀನ ಪ್ರಕ್ರಿಯೆಯನ್ನು ಹಿಂಪಡೆಯಬೇಕು. ಇಲ್ಲದಿದರೆ ರಾಜ್ಯದ ರೈತರ ಆಕ್ರೋಶದ ಜ್ವಾಲೆಯಲ್ಲಿ ನಿಮ್ಮ ಕಾಂಗ್ರೆಸ್ ಸರ್ಕಾರ ಭಸ್ಮವಾಗಬೇಕಾಗುತ್ತದೆ ಎಚ್ಚರ ಎಂದಿದ್ದಾರೆ ಅಶೋಕ.

