ಬೆಂಗಳೂರು: ನನ್ನ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಬಾಂಧವ್ಯ ರಾಜ್ಯಸಭೆ ಸ್ಥಾನವನ್ನು ಮೀರಿದ್ದು ಎಂದು ಮಾಜಿ ಪ್ರಧಾನಿಗಳೂ, ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಹೇಳಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,ಎಪ್ಪತ್ತು ವರ್ಷಗಳ ಸುದೀರ್ಘ ರಾಜಕೀಯ ಜೀವನ ಸವೆಸಿರುವ ನನಗೆ ರಾಜ್ಯಸಭೆ ಸದಸ್ಯನಾಗಬೇಕು ಎಂಬ ವ್ಯಾಮೋಹವಿಲ್ಲ ಎಂದು ಹೇಳುವ ಮೂಲಕ
ಕಳೆದೆರಡು ದಿನಗಳಿಂದ ರಾಜ್ಯಸಭೆ ಸ್ಥಾನದ ವಿಚಾರದಲ್ಲಿ ತಮ್ಮ ಬಗ್ಗೆ ನಡೆಯುತ್ತಿರುವ ಚರ್ಚೆಗೆ ತೆರೆ ಎಳೆದರು.
ಸುದೀರ್ಘ ರಾಜಕೀಯ ಜೀವನದಲ್ಲಿ ಅಧಿಕಾರಕ್ಕಿಂತ ಜನಸೇವೆಯೇ ಮುಖ್ಯವಾಗಿತ್ತು ಎಂಬುದನ್ನು ಅತ್ಯಂತ ವಿನಯಪೂರ್ವಕವಾಗಿ ಹೇಳಲು ಬಯಸುತ್ತೇನೆ ಎಂದು ತಿಳಿಸಿದರು.
ಕೆಲವರು ಸುಖಾಸುಮ್ಮನೆ ಮಾತಾಡುತ್ತಿದ್ದಾರೆ,ಈ ವಿಚಾರದಲ್ಲಿ ನನಗೆ ಅಪಮಾನವಾಗಿದೆ ಎಂಬ ಹೇಳಿಕೆಗಳಿಗೆ ಯಾವುದೇ ಮಹತ್ವವನ್ನು ನಾನು ನೀಡುವುದಿಲ್ಲ ಅದರಲ್ಲಿ ಯಾವುದೇ ಅರ್ಥವೂ ಇಲ್ಲ ಎಂದು ಹೇಳಿದರು.
ನನ್ನ ಮತ್ತು ಪ್ರಧಾನಿ ಮೋದಿ ಅವರ ನಡುವೆ ಉತ್ತಮ ಬಾಂಧವ್ಯ ಇದೆ. ಒಂದು ರಾಜ್ಯಸಭೆ ಸ್ಥಾನ ಇಂತಹ ಉತ್ತಮ ಬಾಂಧವ್ಯವನ್ನು ಹಾಳು ಮಾಡುತ್ತದೆ ಎಂದು ಯಾರಾದರೂ ಭಾವಿಸಿದ್ದರೆ ಅದು ಅವರ ಮೂರ್ಖತನ. ಒಂದು ಕಾಲದಲ್ಲಿ ನಾನು ಮೋದಿಯವರನ್ನು ಕಟುವಾಗಿ ಟೀಕಿಸಿದ್ದೆ ಅದು ನಿಜ. ಆದರೆ ಕಳೆದ ಹಲವು ವರ್ಷಗಳಿಂದ ನಾನು ಅವರನ್ನು ಬಹಳಷ್ಟು ಅರ್ಥ ಮಾಡಿಕೊಂಡಿದ್ದೇನೆ. ಅವರಲ್ಲಿ ವಿಶ್ವಾಸ ಇರಿಸಿದ್ದೇನೆ. ಅವರ ಒಳ್ಳೆಯ ಕೆಲಸಗಳನ್ನು ಹೃದಯಪೂರ್ವಕವಾಗಿ ಶ್ಲಾಘಿಸಿದ್ದೇನೆ ಎಂದು ಗೌಡರು ಒತ್ತಿ ಹೇಳಿದರು.
ಕಾಂಗ್ರೆಸ್ ಪಕ್ಷದ ನಾಯಕರ ಹೇಳಿಕೆಗಳಿಗೆ ಅತೀವ ಬೇಸರ ವ್ಯಕ್ತಪಡಿಸಿದ ದೇವೇಗೌಡರು; ನಾನು ಸುಮ್ಮನೆ ಕೂರುವುದಿಲ್ಲ. ಪಕ್ಷದ ಬಲವರ್ಧನೆಗೆ ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ರಾಜ್ಯ ಮತ್ತು ದೇಶದ ವಿಚಾರಗಳನ್ನು ಸಂಸತ್ತಿನ ಒಳಗೆ ಮತ್ತು ಹೊರಗೆ ನೇರವಾಗಿ ಮಾತನಾಡಿದ್ದೇನೆ ಎಂದು ತಿಳಿಸಿದರು.
ನರೇಂದ್ರ ಮೋದಿ ಅವರ ಬಗ್ಗೆ ಭಾರತ ಅಷ್ಟೇ ಅಲ್ಲ ಜಗತ್ತಿನ ಎಲ್ಲಾ ಭಾಗಗಳಲ್ಲೂ ಗೌರವಭಾವ ಇದೆ. ಅದರಿಂದ ರಾಷ್ಟ್ರಕ್ಕೂ ಒಳ್ಳೆಯದಾಗುತ್ತಿದೆ. ಅವರ ಮಟ್ಟಕ್ಕೆ ಯಾವ ನಾಯಕನು ಬೆಳೆಯಲು ಸಾಧ್ಯವಿಲ್ಲ. ಅವರೊಂದಿಗೆ ನಾನು ಹೊಂದಿರುವ ಬಾಂಧವ್ಯ ವೈಯಕ್ತಿಕ ಮಟ್ಟದ್ದು. ಅದನ್ನು ರಾಜಕೀಯ ಕಾರಣಕ್ಕಾಗಿ ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.
ತಮ್ಮ ರಾಜಕೀಯ ಜೀವನದ ಆರಂಭದ ದಿನಗಳನ್ನು ಸ್ಮರಿಸಿದ ದೇವೇಗೌಡರು, ‘ನಾನು ರಾಜಕಾರಣಕ್ಕೆ ಬಂದು ಎಷ್ಟು ವರ್ಷವಾಯಿತು ಎಂದು ಒಮ್ಮೆ ಯೋಚಿಸಿ. 1954-55 ರಿಂದಲೇ ನಾನು ಸಕ್ರಿಯ ರಾಜಕಾರಣದಲ್ಲಿದ್ದೇನೆ. ಅಂದು ಕೇವಲ ಗುತ್ತಿಗೆ ಕೆಲಸ ಮಾಡುತ್ತಿದ್ದ ನಾನು, ಅದರ ಜೊತೆಜೊತೆಗೆ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ರಾಜಕೀಯಕ್ಕೆ ಬಂದವನು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಜನರ ಮಧ್ಯೆಯೇ ಇದ್ದೇನೆ. ಹಾಗಾಗಿ, ಇಂದು ಒಂದು ಸ್ಥಾನಕ್ಕಾಗಿ ನಾನು ಹಾತೊರೆಯುವ ಅಗತ್ಯವಿಲ್ಲ ಎಂದು ಹೇಳಿದರು.
ರಾಜ್ಯಸಭೆ ಸ್ಥಾನ ತಪ್ಪಿಸಿ ಬಿಜೆಪಿ ದೇವೇಗೌಡರಿಗೆ ಅಪಮಾನ ಮಾಡಿದೆ ಎಂದು ಕಾಂಗ್ರೆಸ್ ನಾಯಕರು ಪದೇಪದೇ ದೂರುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ಮೋದಿ ಅವರ ವಿಶ್ವಾಸದ ಮುಂದೆ ಇವರೆಲ್ಲರ ಹೇಳಿಕೆಗಳು ಟೀಕೆ ಟಿಪ್ಪಣಿಗಳು ಬಹಳ ಸಣ್ಣವು ಎಂದು ಕಡಕ್ಕಾಗಿ ಉತ್ತರಿಸಿದರು.
ಕಾಂಗ್ರೆಸ್ ಪಕ್ಷದ ಸ್ನೇಹಿತರು ನನ್ನ ರಾಜ್ಯ ಸಭೆಯ ವಿಷಯ ವನ್ನೇ ದೊಡ್ಡದಾಗಿ ಬಿಂಬಿಸಿ, ಅದಕ್ಕೆ ರಾಜಕೀಯ ಬಣ್ಣ ಲೇಪಿಸಲು ಪ್ರಯತ್ನ ಮಾಡುತ್ತಿದ್ದಾರೆ. ಒಂದು ವೇಳೆ ರಾಜ್ಯಸಭೆಗೆ ಸ್ಪರ್ಧಿಸುವ ಆಸಕ್ತಿ ನನಗೆ ಇದ್ದಿದ್ದೇ ಆದಲ್ಲಿ ಕಳೆದ ಮೇ 26ರಂದು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕಾಗಿ ನವದೆಹಲಿಗೆ ಹೋಗಿದ್ದಾಗ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದೆ. ನಾನು ಯಾರೊಂದಿಗೂ ಈ ಬಗ್ಗೆ ಮಾತುಕತೆ ನಡೆಸಲಿಲ್ಲ ಎಂದು ಹೆಚ್.ಡಿ.ದೇವೇಗೌಡರು ತಿಳಿಸಿದರು.
ಇವತ್ತು ಒಂದು ವಿಷಯ ಇಟ್ಟುಕೊಂಡು ನನ್ನ ಬಗ್ಗೆ ಇಷ್ಟೆಲ್ಲಾ ಅನುಕಂಪದ ನಾಟಕ ಆಡುತ್ತಿರುವ ಕಾಂಗ್ರೆಸ್ ನಾಯಕರು ಹಿಂದೆಲ್ಲಾ ನನ್ನ ವಿಚಾರದಲ್ಲಿ ಹೇಗೆಲ್ಲಾ ನಡೆದುಕೊಂಡರು ಎಂಬುದು ಗೊತ್ತಿದೆ. ಇದರ ಬಗ್ಗೆ ಹೇಳುತ್ತಾ ಹೋದರೆ ಬಹಳಷ್ಟು ಹೇಳಬಹುದು. ನನಗೆ ಅದರ ಬಗ್ಗೆ ಆಸಕ್ತಿ ಇಲ್ಲ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಗ್ರೇಟರ್ ಬೆಂಗಳೂರು ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಮಾಜಿ ಶಾಸಕರಾದ ಕೆ.ಎ.ತಿಪ್ಪೇಸ್ವಾಮಿ, ಚೌಡರೆಡ್ಡಿ ತೂಪಲ್ಲಿ, ದೊಡ್ಡನಗೌಡ ಪಾಟೀಲ್, ಜೆಡಿಎಸ್ ರಾಜ್ಯ ಕಾನೂನು ವಿಭಾಗದ ಅಧ್ಯಕ್ಷ ಎ.ಪಿ. ರಂಗನಾಥ್, ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಚಂದನ್ ಹಾಗೂ ಪಕ್ಷದ ಕೆಲ ಮುಖಂಡರು ಉಪಸ್ಥಿತರಿದ್ದರು.

