ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು 12 ವರ್ಷ ಸುದೀರ್ಘ ಸೇವೆಯಲ್ಲಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ವಿಕಸಿತ ಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದಾರೆ ಎಂದು ಸಂಸದ ಯದುವೀರ ಒಡೆಯರ್ ಹೇಳಿದರು.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮೋದಿ ಪ್ರಧಾನಿಯಾಗುವ ಮೊದಲು ದೇಶದ ಆರ್ಥಿಕ ಪರಿಸ್ಥಿತಿ ಸರಿಯಿರಲಿಲ್ಲ. ಇದೀಗ ಆರ್ಥಿಕತೆಯಲ್ಲಿ ದೇಶ ಮುಂಚೂಣಿಯಲ್ಲಿದೆ. ವಿದೇಶಿ ಕಂಪನಿಗಳು ಕೂಡ ಭಾರತಕ್ಕೆ ಬರುತ್ತಿವೆ. ವಿಶ್ವಮಟ್ಟದಲ್ಲಿ ಭಾರತಕ್ಕೆ ದೊಡ್ಡ ಗೌರವ ಸಿಗುತ್ತಿದೆ ಎಂದು ಹೇಳಿದರು.
ಮೋದಿ ಸರ್ಕಾರದ ಅವಧಿಯಲ್ಲಿ 25 ಕೋಟಿ ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ. ದೇಶದಾದ್ಯಂತ ಬಡವರ ಸಂಖ್ಯೆ ಶೇ.29ರಿಂದ ಶೇ.11ಕ್ಕೆ ಇಳಿಕೆಯಾಗಿದೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಪ್ರತಿ ರೈತರ ಖಾತೆಗೆ ನೇರವಾಗಿ 6 ಸಾವಿರ ರೂ. ಜಮೆಯಾಗುತ್ತಿದೆ, ಇದಕ್ಕೆ 4.5 ಲಕ್ಷ ಕೋಟಿ ರೂ. ವಿನಿಯೋಗಿಸಲಾಗಿದೆ ಎಂದು ತಿಳಿಸಿದರು.
ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ, ಯುವಕರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ದೇಶೀಯ ಗುಣಮಟ್ಟದ ಉತ್ಪನ್ನಗಳಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಿದೆ ಎಂದು ಸಂಸದರು ಹೇಳಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಮೂಲಕ 500 ವರ್ಷಗಳ ವಿವಾದವನ್ನು ಬಗೆಹರಿಸಿ ದೇಶದ ಜನರ ಕನಸನ್ನು ಮೋದಿ ನನಸು ಮಾಡಿದ್ದಾರೆ. ಯೋಗವನ್ನು ವಿಶ್ವಕ್ಕೆ ಪರಿಚಯ ಮಾಡಿ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗೆ ನಾಂದಿ ಹಾಡಿದ್ದಾರೆ, ಡಿಜಿಟಲ್ ಇಂಡಿಯಾ, ಕ್ಯಾಶ್‌ಲೆಸ್ ಡಿಜಿಟಲ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿ ಮಾಡಿದ್ದಾರೆ ಎಂದು ಯದುವೀರ್ ಸಂತಸ ವ್ಯಕ್ತಪಡಿಸಿದರು.
ದೇಶದ ಆಂತರಿಕ ಭದ್ರತೆಗೆ ಸವಾಲಾಗಿದ್ದ ನಕ್ಸಲಿಸಂ ಕಿತ್ತು ಹಾಕಲಾಗಿದೆ. 370ನೇ ವಿಧಿ ರದ್ದುಗೊಳಿಸುವ ಮೂಲಕ ಜಮ್ಮು-ಕಾಶ್ಮೀರದ ದಶಕಗಳ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಇದೀಗ ದೇಶದಲ್ಲಿ ಜನಗಣತಿ ಹಾಗೂ ಜಾತಿಗಣತಿ ನಡೆಯುತ್ತಿದೆ. ಇದಕ್ಕಾಗಿ ನಾವು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ, ಅವರ ಆಶಯದಂತೆ ನಾವು ಕೆಲಸ ಮಾಡುತ್ತೇವೆ ಎಂದು ಯದುವೀರ್ ತಿಳಿಸಿದರು.

