ಜಮ್ಮು-ಕಾಶ್ಮೀರ 370ನೇ ವಿಧಿ ರದ್ದು ವಿರುದ್ಧದ ಅರ್ಜಿ ವಿಚಾರಣೆಗೆ ಗ್ರೀನ್ ಸಿಗ್ನಲ್

ನವದೆಹಲಿ: ಜಮ್ಮು-ಕಾಶ್ಮೀರ 370ನೇ ವಿಧಿ ರದ್ದು ವಿರುದ್ಧದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್‌ ನೀಡಿದೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವ ಕೇಂದ್ರ ಸರಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಆಗಸ್ಟ್ 2ರಿಂದ ಆಲಿಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ.

ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠವು, ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಆಗಸ್ಟ್‌ 2 ರಿಂದ ಆರಂಭಿಸುವುದಾಗಿ ಹೇಳಿದೆ.

ಸೋಮವಾರ ಮತ್ತು ಶುಕ್ರವಾರ ಹೊರತುಪಡಿಸಿ ಪ್ರತಿದಿನವೂ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು‌‌ ಕೋರ್ಟ್ ಹೇಳಿದೆ.

ಜುಲೈ 27 ರೊಳಗೆ ಎಲ್ಲಾ ದಾಖಲೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸುವಂತೆ‌ ಸೂಚಿಸಲಾಗಿದೆ.

ಜೊತೆಗೆ ಈ ದಾಖಲೆಗಳನ್ನು ನಿರ್ವಹಿಸಲು ಇಬ್ಬರು ವಕೀಲರನ್ನು ನೊಡೆಲ್ ಅಧಿಕಾರಿಗಳಾಗಿ ನೇಮಿಸಲಾಗುವುದು ಎಂದು ಪೀಠ ಹೇಳಿದೆ.

ಇದೇ ವೇಳೆ ಮುಖ್ಯ ಅರ್ಜಿದಾರರಾದ ಐಎಎಸ್ ಅಧಿಕಾರಿ ಶಾ ಫೈಸಲ್ ಮತ್ತು ಶೆಹ್ಲಾ ರಶೀದ್ ಪ್ರಕರಣದಿಂದ ಹಿಂದೆ ಸರಿಯುವುದಾಗಿ ಮತ್ತು ಅರ್ಜಿದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಮನವಿ ಮಾಡಿದರು.

ಇವರ ಮನವಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದೆ.

ಮುಖ್ಯನ್ಯಾಯಮೂರ್ತಿ ಡಿ. ಚಂದ್ರಚೂಡ್​​​ ಸೇರಿದಂತೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ.ಆರ್. ಗವಾಯಿ ಮತ್ತು ಸೂರ್ಯ ಕಾಂತ್ ಅವರನ್ನು ಒಳಗೊಂಡ 5 ನ್ಯಾಯಮೂರ್ತಿಗಳಿರುವ ಪೀಠ ಈ ಅರ್ಜಿಗಳನ್ನು ವಿಚಾರಣೆ ನಡೆಸಲಿದೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಸುಮಾರು ನಾಲ್ಕು ವರ್ಷಗಳ ಬಳಿಕ ವಿಚಾರಣೆ ನಡೆಯುತ್ತಿದೆ.

370ನೇ ವಿಧಿಯನ್ನು ಆಗಸ್ಟ್ 2019 ರಲ್ಲಿ ಶಾಸಕಾಂಗ ಮತ್ತು ಕಾರ್ಯಕಾರಿ ನಿರ್ಧಾರಗಳ ಮೂಲಕ ರದ್ದುಗೊಳಿಸಲಾಯಿತು.

ನಂತರ ಸಂಸತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆಯ ಪ್ರಕಾರ ರಾಜ್ಯವನ್ನು ವಿಭಜಿಸಲು ಅಂಗೀಕರಿಸಿತ್ತು.