ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಡೇಟ್ ಫಿಕ್ಸ್

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ

ಛತ್ತೀಸ್‌ಗಢ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್  ದಿನಾಂಕ ಘೋಷಣೆ ಮಾಡಿದ್ದು, ‌ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.

ಮಿಜೋರಾಂ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ನಕ್ಸಲ್ ಸಂಘರ್ಷ ಪೀಡಿತ ಛತ್ತೀಸ್ ಘಡದಲ್ಲಿ ಮಾತ್ರ 2 ಹಂತದಲ್ಲಿ ಮತದಾನ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.

ಛತ್ತೀಸ್ ಘಡದಲ್ಲಿ ನವೆಂಬರ್ 7 ಮತ್ತು 17ರಂದು 2 ಹಂತದಲ್ಲಿ ಮತದಾನ ನಡೆಯಲಿದೆ.

ಮಿಜೋರಾಂ ನಲ್ಲಿ ನವೆಂಬರ್ 7, ಮಧ್ಯಪ್ರದೇಶದಲ್ಲಿ ನವೆಂಬರ್ 17, ರಾಜಸ್ಥಾನದಲ್ಲಿ ನವೆಂಬರ್ 23 ಮತ್ತು ತೆಲಂಗಾಣದಲ್ಲಿ ನವೆಂಬರ್ 30ರಂದು ಮತದಾನ ನಡೆಯಲಿದೆ.

ಈ‌ ಐದೂ ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 5ರಂದು ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದರು.

ಮಿಜೋರಾಂ, ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ನಡೆಯುವ ಚುನಾವಣೆಯಲ್ಲಿ ಒಟ್ಟು 8.2 ಕೋಟಿ ಪುರುಷ ಮತ್ತು 7.8 ಕೋಟಿ ಮಹಿಳಾ ಮತದಾರರು ಇರಲಿದ್ದಾರೆ. ಈ ಪೈಕಿ 60.2 ಲಕ್ಷ ಮಂದಿ ಮೊದಲ ಬಾರಿಗೆ ಮತದಾರರಾಗಿದ್ದಾರೆ ಎಂದು ಹೇಳಿದರು.

ಈ ಐದು ವಿಧಾನಸಭಾ ಚುನಾವಣೆಗೆ ಸಂಬಂಧ ನಾವು ರಾಜಕೀಯ ಪಕ್ಷಗಳು ಮತ್ತು ಜಾರಿ ಸಂಸ್ಥೆಗಳು ಸೇರಿದಂತೆ ಎಲ್ಲಾ ಮಧ್ಯಸ್ಥಗಾರರು, ರಾಜಕೀಯ ಪಕ್ಷಗಳ ವಕ್ತಾರರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ ಎಂದು ಹೇಳಿದರು.

ಮಧ್ಯಪ್ರದೇಶದ ಒಟ್ಟು 230 ಸ್ಥಾನಗಳು, ಛತ್ತೀಸ್‌ಗಢದ- 90 ಸ್ಥಾನಗಳು, ರಾಜಸ್ಥಾನದ 200 ಸ್ಥಾನಗಳು, ತೆಲಂಗಾಣದ 119 ಸ್ಥಾನಗಳು ಮತ್ತು ಮಿಜೋರಾಂನ 90 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು.

ಚುನಾವಣೆ ನಡೆಯುವ ಈ ಐದು ರಾಜ್ಯಗಳಲ್ಲಿ 940 ಕ್ಕೂ ಹೆಚ್ಚು ಅಂತರ-ರಾಜ್ಯ ಗಡಿ ಚೆಕ್ ಪೋಸ್ಟ್‌ ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.