ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್ 4ರಿಂದ 15ರವರೆಗೆ ಚಳಿಗಾಲದ ಅಧಿವೇಶನ ನಡೆಯಲಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರು, ಚಳಿಗಾಲ ಅಧಿವೇಶನ ಕುರಿತು ಮಾಹಿತಿ ನೀಡಿದರು.
ಡಿಸೆಂಬರ್ 4ರಿಂದ 15ರ ವರೆಗೂ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ಸಿದ್ಧತೆ ನಡೆಸುವಂತೆ ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. 10 ದಿನಗಳ ಕಾಲ ಅಧಿವೇಶನ ನಡೆಯಲಿದೆ ಎಂದು ಹೇಳಿದರು.
ಡಿಸೆಂಬರ್ 3 ರಂದು ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಹೊರಬೀಳಲಿದೆ.ಇದರ ಬೆನ್ನಲ್ಲೇ ಚಳಿಗಾಲದ ಅಧಿವೇಶನ ಆರಂಭವಾಗಲಿದೆ.
ಡಿಸೆಂಬರ್ 15 ರ ನಂತರ ಶೂನ್ಯ ಮಾಸ ಕಾರಣ ಈ ದಿನಗಳಲ್ಲಿ ಸರ್ಕಾರ ಅಧಿವೇಶನ ನಡೆಸಲ್ಲ. ಇನ್ನು ನವೆಂಬರ್ ನಲ್ಲಿ ದೀಪಾವಳಿ ರಜೆ, ಕನಕ ಜಯಂತಿ ಇರುವುದರಿಂದ ಅಧಿವೇಶನ ನಡೆಸಲು 10 ದಿನಗಳು ಸಿಗುವುದಿಲ್ಲ,ಹಾಗಾಗಿ ಡಿಸೆಂಬರ್ 4 ರಿಂದ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

