ಯಾರು ಸಿಎಂ ಆಗಬೇಕು, ಯಾರು ಮುಂದುವರೆಯಬೇಕೆಂಬುದು ಹೈಕಮಾಂಡ್ ನಿರ್ಧರಿಸಲಿದೆ -ಪ್ರಿಯಾಂಕ್ ಖರ್ಗೆ

ಮೈಸೂರು: ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಬೇಕು, ಡಿ.ಕೆ ಶಿವಕುಮಾರ್ ಸಿಎಂ ಆಗಬೇಕೆಂಬ ವಿಚಾರ ಅವರವರ ವೈಯಕ್ತಿಕ ಹೇಳಿಕೆ,ಹೈ ಕಮಾಂಡ್ ಯಾರು ಸಿಎಂ ಆಗಬೇಕು ಯಾರು ಮುಂದುವರೆಯಬೇಕು ಎಂಬುದನ್ನು ನಿರ್ಧರಿಸುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಹೈ ಕಮಾಂಡ್ ನೀನು ಸಿಎಂ ಆಗು ಅಂದರೆ ನಾನೂ ಸಿದ್ದನಿದ್ದೇನೆ ಎಂದು ತಿಳಿಸಿದರು.

ಸಿಎಂ ಅಧಿಕಾರ ಹಂಚಿಕೆ ಕುರಿತು ದೆಹಲಿಯಲ್ಲಿ ನಾಲ್ಕು ಜನ ಕುಳಿತು ಮಾತನಾಡಿದ್ದಾರೆ, ಅವರಿಗೆ ಮಾತ್ರ ಈ ವಿಚಾರದ ಬಗ್ಗೆ ಸ್ಪಷ್ಟತೆ ಇದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯರಿಂದ ಹಿಡಿದು ಶಾಸಕರವರೆಗೆ ಎಲ್ಲರಿಗೂ ತಮ್ಮ ಅಭಿಪ್ರಾಯ ಹೇಳಲು ಸ್ವಾತಂತ್ರ್ಯವಿದೆ

ಇದರಲ್ಲಿ ತಪ್ಪೇನೂ ಇಲ್ಲ

ಆದರೆ ಅವರ ಹೇಳಿಕೆ ಶಾಸನವಲ್ಲ,ಎಲ್ಲವೂ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ತಿಳಿಸಿದರು.

ರಾಜ್ಯದಲ್ಲಿ ವಿಪಕ್ಷ ಎಲ್ಲಿದೆ, ಬಿಜೆಪಿ  ಲೀಡರ್ ಲೆಸ್, ಜೆಡಿಎಸ್ ಪೀಪಲ್ ಲೆಸ್ ಪಾರ್ಟಿಯಾಗಿದೆ ಎಂದು ಇದೇ ವೇಳೆ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.

ಬಿಜೆಪಿ ನಾಯಕರಿಗೆ ರಾಜ್ಯದಲ್ಲಿ ಧ್ವನಿ ಇಲ್ಲದಂತಾಗಿದೆ,ಇಲ್ಲಿ ಕಾಂಗ್ರೆಸ್ ವಿರುದ್ದ ಘರ್ಜಿಸುವ ಬದಲು ಕೇಂದ್ರ ನಾಯಕರ ಬಳಿ ಘರ್ಜಿಸಿದರೆ ವಿಪಕ್ಷ ಸ್ಥಾನವಾದರು ಸಿಗುತಿತ್ತು,ನಮಗೆ ಅವರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದರು.

ಯಡಿಯೂರಪ್ಪ ಅವರನ್ನ ಬಿಜೆಪಿಯವರು ಕಡೆಗಣಿಸಿದ್ದಾರೆ, ಈಗ ಮಾತನಾಡಿದರೆ ಮಗನಿಗೆ ಸ್ಥಾನ ಸಿಗಬಹುದು ಎಂಬ ಕಾರಣಕ್ಕೆ ಅವರು ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಜೆಡಿಎಸ್ ನ ಕುಟುಂಬದವರು ಹೋಗಿ ಮಾಡಿಕೊಂಡು ಬಂದ ಮೈತ್ರಿ ಇದು ರಾಜ್ಯದ ಬಿಜೆಪಿ ನಾಯಕರು ಸಹ ಹೋಗಿಲ್ಲ. ಮಾಜಿ ಸಚಿವರು, ಮಾಜಿ ಸಿಎಂ ಎಲ್ಲರನ್ನೂ ಕತ್ತಲಲ್ಲಿಟ್ಟು ಮೈತ್ರಿ ಮಾಡಲಾಗಿದೆ.

ಇದನ್ನು ಖುದ್ದು ಬಿಜೆಪಿಯ ರೇಣುಕಾಚಾರ್ಯ ಅವರೇ ಹೇಳಿದ್ದಾರೆ. ಬಿಜೆಪಿಯವರು ತಮ್ಮದನ್ನ ತಾವು ನೋಡಿಕೊಳ್ಳಲಿ

ಕಾಂಗ್ರೆಸ್ ನ ಚಿಂತೆ ಅವರಿಗೆ ಬೇಡ ಎಂದು ಸಚಿವರು ತಿರುಗೇಟು ನೀಡಿದರು.