ಬೆಂಗಳೂರು: ಗ್ಯಾರಂಟಿಗಳಿಗೂ ಕುಮಾರಸ್ವಾಮಿಗೂ ಏನು ಸಂಬಂಧ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕೆ ತೀಕ್ಷ್ಣ ತಿರುಗೇಟು ಕೊಟ್ಟಿದ್ದಾರೆ.
ಇದು ಕರ್ನಾಟಕ, ಡಿಕೆಶಿ ರಿಪಬ್ಲಿಕ್ ಅಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅವರು; ಜನರು ಆಡಳಿತ ಪಕ್ಷದಲ್ಲಿ ಕೂರಿಸಿದ್ದಾರೆ ಎಂದಷ್ಟಕ್ಕೇ ಇವರ ತಲೆ ನಿಲ್ಲುತ್ತಿಲ್ಲ. ಚಕ್ರ ತಿರುಗಲು ಶುರು ಮಾಡಿದೆ. ಅದು ಕೆಳಕ್ಕೆ ಬಂದೇ ಬರುತ್ತದೆ. ಸ್ವಲ್ಪ ಸಮಯ ಬೇಕಷ್ಟೇ, ಆಗ ತಿರುಗುವ ತಲೆ ತಾನಾಗಿಯೇ ನಿಲ್ಲುತ್ತದೆ ಎಂದು ಕುಟುಕಿದ್ದಾರೆ.
ಡೂಪ್ಲಿಕೇಟ್ ಸಿಎಂ (DCM) ಬಹಳ ಆವೇಶದಲ್ಲಿದ್ದಾರೆ. ಅತಿಯಾದ ಆವೇಶ ಆರೋಗ್ಯಕ್ಕೆ ಹಾನಿಕಾರಕ ಎಂಬ ಬಗ್ಗೆ
ಎಚ್ಚರಿಕೆ ಇರಲಿ ಎಂದು ಬರೆದಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿಗೂ ಗ್ಯಾರಂಟಿಗಳಿಗೂ ಏನು ಸಂಬಂಧ? ಎಂಬ ಆಣಿಮುತ್ತು ಉದುರಿಸಿದ್ದಾರೆ. ಅಧಿಕಾರದ ಪಿತ್ತ ನೆತ್ತಿಗೇರಿ ಮಿದುಳು ಕೆಲಸ ಮಾಡದಿದ್ದರೆ ನಾಲಿಗೆ ಹೀಗೆ ಮಾತನಾಡುತ್ತದೆ ಇದರಲ್ಲಿ ಅಚ್ಚರಿಯೇನೂ ಇಲ್ಲ ಎಂದಿದ್ದಾರೆ.
ಇದು ಕರ್ನಾಟಕ, ಡಿಕೆಶಿ ರಿಪಬ್ಲಿಕ್ ಅಲ್ಲ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ, ಪ್ರತಿಪಕ್ಷ ಇರುತ್ತವೆ. ಇದು ಗೊತ್ತಿಲ್ಲದಷ್ಟು ಅಜ್ಞಾನವೇ? ಪ್ರಶ್ನೆ ಮಾಡಬೇಕು ಎಂತಲೇ ಜನ ನನ್ನನ್ನು ವಿರೋಧಪಕ್ಷದಲ್ಲಿ ಕೂರಿಸಿದ್ದಾರೆ.
ಪಂಚರತ್ನಗಳು ರಾಜ್ಯದ ಸಮಗ್ರ ಅಭಿವೃದ್ಧಿಗೆ ನಾನು ರೂಪಿಸಿದ್ದ ಪಂಚಸೂತ್ರಗಳು. ಕಾಂಗ್ರೆಸ್ ಗ್ಯಾರಂಟಿಗಳು ಜನರನ್ನು ಶಾಶ್ವತ ಆರ್ಥಿಕವೈಕಲ್ಯರನ್ನಾಗಿಸುವ ತಾತ್ಕಾಲಿಕ ತಂತ್ರಗಳಷ್ಟೇ ಎಂದು ಕಾಲೆಳೆದಿದ್ದಾರೆ.
ಗ್ಯಾರಂಟಿಗಳು ಹಳ್ಳ ಹಿಡಿದು ವಿಫಲವಾಗಿವೆ. ಅನುಮಾನವೇ ಇಲ್ಲ. ಯಾವ ಗ್ಯಾರಂಟಿಯೂ ಸಮರ್ಪಕ ಜಾರಿ ಆಗಿಲ್ಲ. ಎಷ್ಟು ಜನರಿಗೆ ಫಲ ಸಿಕ್ಕಿದೆ? ಆರ್ಥಿಕವಾಗಿ ಹೊರೆ ಎಷ್ಟು ಬಿದ್ದಿದೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಿ, ಬನ್ನಿ ಚರ್ಚೆಗೆ, ನಾನು ತಯಾರಿದ್ದೇನೆ ಎಂದು ಪಂಥಾಹ್ವಾನ ನೀಡಿದ್ದಾರೆ ಎಚ್ ಡಿ ಕೆ.

