ಬೆಂಗಳೂರು: ಕನಕದಾಸರು ಸಮಾಜ ಸುಧಾರಕರಾಗಿದ್ದರು. ಸಾಹಿತ್ಯದ ಮೂಲಕ ಮನುಷ್ಯತ್ವವನ್ನು ಸಾರಿದರು ಎಂದು ಸಿದ್ದರಾಮಯ್ಯ ತಿಳಿಸಿದರು.
ಕನಕದಾಸರ ಜಯಂತಿ ಪ್ರಯುಕ್ತ ಶಾಸಕರ ಭವನ ಆವರಣದಲ್ಲಿ ಸಂತ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸಿಎಂ ಮಾತನಾಡಿದರು.
ಇಡೀ ಜಾತ್ಯಾತೀತವಾದ, ಮೇಲು ಕೀಳು ಬೇಧಭಾವವಿಲ್ಲದ ಸಮಸಮಾಜ ನಿರ್ಮಿಸಲು ಶ್ರಮಿಸಿದ ವಿಶ್ವಮಾನವ ಎಂದು ಬಣ್ಣಿಸಿದರು.
ರಾಮಧ್ಯಾನ ಚರಿತೆ, ಮೋಹನತರಂಗಿಣಿ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದವರು. ಸಮಾಜದ ತಾರತಮ್ಯ ಹೋಗಲಾಡಿಸಲು ಹೋರಾಡಿದ ದಾಸಶ್ರೇಷ್ಠರ ದಿನವನ್ನು ಸರ್ಕಾರ ಇಂದು ಆಚರಿಸುತ್ತಿದೆ ಎಂದು ತಿಳಿಸಿದರು.
ಸಾಹಿತ್ಯದ ಮೂಲಕ ತಮ್ಮ ಆದರ್ಶಗಳನ್ನು ಜನರಿಗೆ ತಿಳಿಹೇಳಿ ಜಾಗೃತಿ ಮೂಡಿಸಿದ್ದರು. ಜನರಿಗೆ ಅರ್ಥವಾಗುವ ಸರಳಭಾಷೆಯಲ್ಲಿ ದಾಸಸಾಹಿತ್ಯವನ್ನು ರಚಿಸಿದರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನಾಡಿನ ಜನತೆಗೆ ಕನಕದಾಸ ಜಯಂತಿಯ ಶುಭಾಶಯಗಳನ್ನು ಕೋರಿದರು.
ಸಮಾರಂಭದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ,
ಜನರ ಅನುಕೂಲಕ್ಕಾಗಿ ಈ ವರ್ಷ ಹೆಚ್ಚುವರಿಯಾಗಿ 188 ಇಂದಿರಾ ಕ್ಯಾಂಟೀನ್ ಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಇಂದಿರಾ ಕ್ಯಾಂಟೀನ್ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಪ್ರಶ್ನೆಗೆ, ಬೆಂಗಳೂರಿನ 225 ವಾರ್ಡ್ ಗಳಲ್ಲಿಯೂ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಇದಲ್ಲದೇ ಇಂದಿರಾ ಕ್ಯಾಂಟೀನ್ ಗೆ ಸ್ಥಳದ ಅಭಾವವಿರುವ ಕಡೆ ಮೊಬೈಲ್ ಕ್ಯಾಂಟೀನ್ ಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಮಾಜಿ ಸಚಿವ ಎಚ್.ಆಂಜನೇಯ ಹಾಗೂ ಕುರುಬ ಸಮುದಾಯದ ಮುಖಂಡರು ಹಾಜರಿದ್ದರು.

