ಪ್ರತಿ ಚುನಾವಣಾ ಫಲಿತಾಂಶದಲ್ಲಿ ರಾಜಕೀಯ ಪಕ್ಷಗಳು ಕಲಿಯುವ ಪಾಠ ಇದೆ:ಸಿಎಂ ‌ಸಿದ್ದರಾಮಯ್ಯ

ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವುಗಳು ಸ್ವಾಭಾವಿಕ, ಪ್ರತಿಯೊಂದು ಚುನಾವಣಾ ಫಲಿತಾಂಶದಲ್ಲಿ ರಾಜಕೀಯ ಪಕ್ಷಗಳು ಕಲಿಯುವ ಪಾಠ ಇದೆ ಎಂದು ಮುಖ್ಯ ಮಂತ್ರಿ ‌ಸಿದ್ದರಾಮಯ್ಯ ತಿಳಿಸಿದರು

ಫಲಿತಾಂಶ ಕುರಿತು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ,
ನಾವು ಸೋಲಿನಿಂದ ಕುಗ್ಗುವುದಿಲ್ಲ, ಗೆಲುವಿನಿಂದ ಹಿಗ್ಗುವುದಿಲ್ಲ ಎಂದು ಹೇಳಿದರು.

ನಾಲ್ಕು ರಾಜ್ಯಗಳ ಚುನಾವಣೆಗಳ ಪೈಕಿ ತೆಲಂಗಾಣದಲ್ಲಿ ಕಾಂಗ್ರೆಸ್ ಸ್ಪಷ್ಟ ಗೆಲುವು ಸಾಧಿಸಿದೆ. ಮಧ್ಯಪ್ರದೇಶ, ರಾಜಸ್ತಾನ, ಚತ್ತೀಸ್ ಘಡಗಳಲ್ಲಿ ಹಿನ್ನಡೆ ಆಗಿದೆ.

ತೆಲಂಗಾಣ ನಮ್ಮ ನೆರೆಯ ರಾಜ್ಯವಾಗಿರುವ ಕಾರಣ ಅಲ್ಲಿನ ಗೆಲುವಿನಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ಸು ಮತ್ತು ಕಾಂಗ್ರೆಸ್ ಪಕ್ಷದ ನಾಯಕರ ಶ್ರಮದ ಪಾತ್ರ ಇದೆ ಎಂದು ತಿಳಿಸಿದರು.

ರಾಹುಲ್ ಗಾಂಧಿಯವರ ಭಾರತ್ ಜೋಡೋ ಕಾರ್ಯಕ್ರಮ ಅಲ್ಲಿನ ಪಕ್ಷದ ಕಾರ್ಯಕರ್ತರನ್ನು ಇನ್ನಷ್ಟು ಹುರಿದುಂಬಿಸಿದ್ದು ನಿಜ, ಅದರ ನಂತರ ಬಹಳ ವ್ಯವಸ್ಥಿತವಾದ ಪ್ರಚಾರ ನಡೆಯಿತು.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಮತ್ತು ನುಡಿದಂತೆ ನಡೆದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಗೊಳಿಸಿದ್ದು ತೆಲಂಗಾಣದ ಮತದಾರರು ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಇಡುವಂತಾಯಿತು ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಬಿ ಆರ್ ಎಸ್ ಪಕ್ಷದ ಜೊತೆ ಒಳ ಒಪ್ಪಂದ ಮಾಡಿಕೊಂಡದ್ದು ಮತದಾರರು ಎರಡು ಪಕ್ಷಗಳ ಮೇಲೆ ಭರವಸೆ ಕಳೆದುಕೊಳ್ಳುವಂತೆ ಮಾಡಿತು.

ಈ ಒಳ ಒಪ್ಪಂದದ ತಂತ್ರಗಾರಿಕೆಯನ್ನು ಕಾಂಗ್ರೆಸ್ ಪಕ್ಷ ಪ್ರಚಾರದ ಸಮಯದಲ್ಲಿ ಬಯಲು ಮಾಡಿದ್ದು‌ ಕೂಡಾ ನಮ್ಮ ಗೆಲುವಿಗೆ ಕಾರಣ ಎಂದು ಸಮರ್ಥಿಸಿಕೊಂಡರು ಸಿದ್ದು.

ರಾಜಸ್ತಾನದಲ್ಲಿ ಸಾಮಾನ್ಯವಾಗಿ ಪ್ರತಿ ಚುನಾವಣೆಯಲ್ಲಿ ಪಕ್ಷವನ್ನು‌ ಬದಲಾಯಿಸುವ ಕಾರಣದಿಂದಾಗಿ ಅಶೋಕ್ ಗೆಹ್ಲೋತ್ ಸರ್ಕಾರ ಒಳ್ಳೆಯ ಕೆಲಸ ಮಾಡಿದ್ದರೂ ಮರಳಿ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ.

ರಾಜಸ್ತಾನ ಮತ್ತು ಚತ್ತೀಸ್ ಘಡ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಆಡಳಿತ ವಿರೋಧಿ ಅಲೆ ಕೂಡಾ ಕಾರಣ ಎಂದು ಸಿದ್ದರಾಮಯ್ಯ ಹೇಳಿದರು.