ಬೆಂಗಳೂರು: ನೆಹರೂ-ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ವಿಜ್ಞಾನ ಮತ್ತು ತಂತ್ರಜ್ಞಾನದ ಆಧುನಿಕ ಭಾರತದ ನಿರ್ಮಾತೃಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಭಾರತ್ ಜೋಡೋ ಸಭಾಂಗಣದಲ್ಲಿ ಆಯೋಜಿಸಿದ್ದ 139 ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯನ್ನು ಮಹಾತ್ಮಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಸಿಎಂ,ಸಾಮಾಜಿಕ ನ್ಯಾಯ ಉಳಿದಿರುವುದು ಕಾಂಗ್ರೆಸ್ ನಿಂದ ಮಾತ್ರ ಎಂದು ತಿಳಿಸಿದರು.
ಸ್ವಾತಂತ್ರ್ಯದ ಹೊಸ್ತಿಲಲ್ಲಿ ಭಾರತದ ತುಂಬ ಸಾವಿರಾರು ಸಮಸ್ಯೆಗಳಿದ್ದವು. ಆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಬಂದಿದ್ದು ಕಾಂಗ್ರೆಸ್, ಈಗಲೂ ಹಲವು ಸಮಸ್ಯೆಗಳಿವೆ. ಇವುಗಳ ಪರಿಹಾರಕ್ಕೂ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ ಎಂದು ಹೇಳಿದರು.
ಕಾಂಗ್ರೆಸ್ ಹೋರಾಟದ ಮಾರ್ಗದಲ್ಲೇ ಅಧಿಕಾರಕ್ಕೆ ಬರುತ್ತದೆ. ಭಾರತ್ ಜೋಡೋ ನಂತರ ರಾಹುಲ್ ಗಾಂಧಿ ಅವರು ಮತ್ತೊಂದು ಸುತ್ತು ಪಾದಯಾತ್ರೆ ಹೊರಟಿದ್ದಾರೆ. ರಾಹುಲ್ ಗಾಂಧಿ ಅವರು ದೇಶದ ನೇತೃತ್ವ ವಹಿಸುತ್ತಾರೆ. ಪ್ರಧಾನಿ ಆಗುತ್ತಾರೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಜಗತ್ತಿನಲ್ಲಿ ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ ಗಳಿಸುವ ಮಾರ್ಗವನ್ನು ಸಾಧಿಸಿದವರು ಮಹಾತ್ಮಗಾಂಧಿ. ಬ್ರಿಟಿಷರನ್ನು ಅಹಿಂಸೆ ಮೂಲಕ ಮಣಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಹುತಾತ್ಮರಾದರು. ಲಕ್ಷಾಂತರ ಮಂದಿಯ ತ್ಯಾಗ-ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದಕ್ಕಿದೆ. ಕಾಂಗ್ರೆಸ್ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳವಳಿ ನಡೆಯಿತು ಎಂದು ಹೇಳಿದರು.
ಬಿಜೆಪಿ, ಜನ ಸಂಘ, ಆರ್ ಎಸ್ ಎಸ್ ಮತ್ತು ಸಂಘ ಪರಿವಾರದ ಒಬ್ಬೇ ಒಬ್ಬರು ಬ್ರಿಟಿಷರ ವಿರುದ್ಧ ಹೋರಾಟ ಮಾಡಲಿಲ್ಲ. ಬ್ರಿಟಿಷರ ಅವಧಿಯಲ್ಲೇ ಆರ್ ಎಸ್ ಎಸ್ ಹುಟ್ಟಿತ್ತು. ಆದರೆ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಒಂದೇ ಒಂದು ದಿನವೂ ಇವರು ಭಾಗವಹಿಸಲಿಲ್ಲ.
ಆದ್ದರಿಂದ ಬಿಜೆಪಿಯ ಡೋಂಗೀತನವನ್ನು ಅರ್ಥ ಮಾಡಿಕೊಂಡು ಜನರಿಗೆ ಮನವರಿಕೆ ಮಾಡಿಸಬೇಕು ಎಂದು ಕಾರ್ಯಕರ್ತರಿಗೆ ಸಿದ್ದು ಕರೆ ನೀಡಿದರು.
ಹಿಂದೂ ಬೇರೆ-ಹಿಂದುತ್ವವೇ ಬೇರೆ. ನಾವು ರಾಮನನ್ನು ಪೂಜಿಸಲ್ವಾ, ನಮ್ಮೂರುಗಳಲ್ಲಿ ರಾಮಮಂದಿರ ಕಟ್ಟಿಲ್ವಾ, ರಾಮನ ಭಜನೆ ಮಾಡುವುದಿಲ್ವಾ. ಬಿಜೆಪಿಯವರದ್ದು ಡೋಂಗಿ ಹಿಂದುತ್ವ ಎಂದು ಸಿಎಂ ಟೀಕಿಸಿದರು.
ಇಂಟರ್ ನೆಟ್ ದೇಶದ ತುಂಬ ವಿಸ್ತರಿಸಲು ಅಡಿಪಾಯ ಹಾಕಿದವರು ರಾಜೀವ್ ಗಾಂಧಿ. ಬಿಜೆಪಿಯವರು ಬುರುಡೆ ಬಿಡುವುದನ್ನು ಬಿಟ್ಟು ಬೇರೇನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಸಚಿವರುಗಳಾದ ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ , ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮಾಜಿ ಸಚಿವೆ ರಾಣಿ ಸತೀಶ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

