ಬೆಂಗಳೂರು: ಬಾಬು ಜಗಜೀವನ್ ರಾಮ್ ಸ್ವಾತಂತ್ರ್ಯ ಹೋರಾಟ
ಗಾರರಾಗಿದ್ದವರು ಹಾಗೂ ದಮನಿತರಿಗೆ ಮಾತ್ರವಲ್ಲದೆ ಎಲ್ಲಾ ಶೋಷಿತ ವರ್ಗಕ್ಕೆ ಸಾಮಾಜಿಕ ನ್ಯಾಯ ದೊರಕಿಸಲು ಶ್ರಮಿಸಿದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದ್ದಾರೆ
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಧಾಸೌಧದ ಪಶ್ಚಿಮ ದ್ವಾರದ ಬಳಿ ಆಯೋಜಿಸಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ ರಾಷ್ಟ್ರ ನಾಯಕ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರ 118 ನೇ ಜನ್ಮ ದಿನಾಚರಣೆಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಎಂ ಮಾತನಾಡಿದರು.
ಇಂತಹ ಮಹಾನ್ ನಾಯಕರನ್ನು ಸ್ಮರಿಸಿ ಗೌರವಿಸುವ ಕೆಲಸವನ್ನು ಸರ್ಕಾರ ಇಂದು ಮಾಡಿದೆ ತಿಳಿಸಿದರು.
ಬಾಬು ಜಗಜೀವನ್ ರಾಂ ಅವರು ದೇಶ ಕಂಡ ಅಪ್ರತಿಮ ನಾಯಕರು.ದೀರ್ಘ ಕಾಲ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಅನೇಕ ಇಲಾಖೆಗಳನ್ನು ನಿಭಾಯಿಸಿದರು. ಕೃಷಿ, ರಕ್ಷಣೆ ಸೇರಿದಂತೆ ಯಾವುದೇ ಇಲಾಖೆಯಲ್ಲಿದ್ದರೂ ಎಲ್ಲಾ ಇಲಾಖೆಗಳಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿ, ಅವರ ಹೆಜ್ಜೆಗುರುತುಗಳನ್ನು ಬಿಟ್ಟುಹೋಗಿದ್ದಾರೆ ಎಂದು ಸಿದ್ದು ತಿಳಿಸಿದರು.
ದೇಶದ ಪ್ರಗತಿಯಲ್ಲಿ ನಮ್ಮ ಪ್ರಗತಿ, ಅದರ ಉದ್ಧಾರದಲ್ಲೇ ನಮ್ಮ ಉದ್ಧಾರ ಹಾಗೂ ಅದರ ವಿಮೋಚನೆಯಲ್ಲೇ ನಮ್ಮ ವಿಮೋಚನೆಯಿದೆ ಎಂದು ನುಡಿದ ಅವರು ಅಪ್ರತಿಮ ದೇಶಭಕ್ತರೂ ಆಗಿದ್ದರು, ಅವರ ಜನ್ಮದಿನೋತ್ಸವವಾದ ಇಂದು ಅವರಿಗೆ ನಮನಗಳನ್ನು ಸಲ್ಲಿಸಿದ್ದೇವೆ ಇದು ಸಂತಸದ ಕ್ಷಣ ಎಂದು ತಿಳಿಸಿದರು.
ಬಿಜೆಪಿ ಕಾರ್ಯಕರ್ತರ ಆತ್ಮಹತ್ಯೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಪ್ರಕರಣದಲ್ಲಿ ಎಫ್ಐಆರ್ ಆಗಿದೆ, ತನಿಖೆ ನಡೆಯುತ್ತಿದೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು
ಬಿಜೆಪಿಯ ಬೇಡಿಕೆಗೆಲ್ಲಾ ಉತ್ತರಿಸಲು ಸಾಧ್ಯವಿಲ್ಲ,ಬಿಜೆಪಿಯವರು ಹತಾಶರಾಗಿದ್ದು, ಹೇಳಿಕೆ ನೀಡಿದ್ದಾರೆ. ಸಾವಿನಲ್ಲೂ ರಾಜಕೀಯ ಮಾಡುವುದು ಬಿಜೆಪಿಗೆ ಅಭ್ಯಾಸ ಎಂದು ಸಿಎಂ ಟೀಕಿಸಿದರು.