ಸಿದ್ದರಾಮಯ್ಯನವರ ಮಾತು ಆಘಾತ ತಂದಿದೆ,ಜನರ ಕ್ಷಮೆಯಾಚಿಸಲಿ: ಅಶೋಕ

ಬೆಂಗಳೂರು: ದೇಶ ಸಂಕಷ್ಟದಲ್ಲಿರುವ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಆಡಿರುವ ಮಾತು ಆಘಾತ ತಂದಿದೆ ಎಂದು
ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.

ಮತ ಸಿಕ್ಕಿದರೆ ಸಾಕು ಎಂಬ ಮನಸ್ಥಿತಿ ಅವರಿಗೆ ಬಂದಿರುವುದು ನಾಚಿಕೆಗೇಡಿನ ಸಂಗತಿ ಹಾಗೂ ಖಂಡನೀಯ. ಈ ಕುರಿತು ಸಿಎಂ ಸಿದ್ದರಾಮಯ್ಯ ಜನರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ರೇಲ್‌ನಲ್ಲಿ ನಾಗರಿಕರು ಸಂಭ್ರಮಿಸುತ್ತಿರುವಾಗ ಅವರನ್ನು ಕೊಂದಂತೆಯೇ, ಜಮ್ಮು ಕಾಶ್ಮೀರದಲ್ಲೂ ಭಯೋತ್ಪಾದಕರು ಹಿಂದೂಗಳ ಹತ್ಯೆ ಮಾಡಿದ್ದಾರೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಕ್ಷಮಿಸಬಹುದು. ದೇಶಕ್ಕೇನಾದರೂ ಆಗಲಿ ಪರವಾಗಿಲ್ಲ, ಮತ ಸಿಕ್ಕಿದರೆ ಸಾಕು ಎಂಬ ಮನಸ್ಥಿತಿ ಅವರಿಗೆ ಬಂದಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.

ದೇಶಾದ್ಯಂತ ಜನರು ಪ್ರತಿಭಟನೆ ನಡೆಸುತ್ತಿರುವಾಗ, ಹೋದ ಜೀವಗಳನ್ನು ವಾಪಸ್‌ ತರಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ಘಟನೆ ಅವರ ಕುಟುಂಬಕ್ಕೆ ಆಗಿದ್ದರೆ ಅವರ ಮಾತು ಹೀಗೆ ಇರುತ್ತಿರಲಿಲ್ಲ. ಕರುಣೆ ಇಲ್ಲದೆಯೇ ಈ ರೀತಿ ಮಾತನಾಡಿ, ಬಳಿಕ ಸಂತ್ರಸ್ತರ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲಿ ಹೋಗಿ ಹಾರ ಹಾಕಿ ಇಲ್ಲಿ ಬಂದು ಹೀಗೆ ಮಾತಾಡುತ್ತಿದ್ದಾರೆ. ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ತೀರ್ಮಾನದ ಜೊತೆಗೆ ನಿಲ್ಲುತ್ತೇವೆ ಎಂದಿದ್ದಾರೆ. ಇಲ್ಲಿ ಸಿಎಂ ಸಿದ್ದರಾಮಯ್ಯ ಮನೆ ಮುರಿಯುವ ಮಾತನಾಡಿದ್ದಾರೆ ಎಂದು ಆರೋಪಿಸಿದರು ‌

ಭಟ್ಕಳದಲ್ಲಿ ಪಾಕಿಸ್ತಾನದ ಸುಮಾರು ಹನ್ನೆರಡು ಪ್ರಜೆಗಳಿದ್ದಾರೆ. ಕೇಂದ್ರ ಸರ್ಕಾರ ಹೊರಗೆ ಹಾಕಿ ಎಂದು ಸೂಚಿಸಿದ್ದರೂ, ರಾಜ್ಯ ಸರ್ಕಾರ ಏನೂ ಮಾಡಿಲ್ಲ. ಕಲಬುರ್ಗಿಯಲ್ಲಿ ಪಾಕಿಸ್ತಾನದ ಧ್ವಜವನ್ನು ರಸ್ತೆಗೆ ಅಂಟಿಸಿದರೆ ಮುಸ್ಲಿಂ ಮಹಿಳೆಯರು ಅದನ್ನು ತೆಗೆದುಹಾಕಿದ್ದಾರೆ. ನಮ್ಮ ದೇಶದ ಒಳಗೆಯೇ ಶತ್ರುಗಳಿದ್ದಾರೆ. ಇಂತಹ ಮೀರ್‌ ಸಾಧಿಕ್‌ಗಳ ಕಡೆಗೆ ಗಮನಹರಿಸಬೇಕು. ಪಾಕಿಸ್ತಾನಕ್ಕೆ ಅಪಮಾನ ಮಾಡಿದ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇದರಿಂದ ಕಾಂಗ್ರೆಸ್‌ನ ಬಣ್ಣ ಬಯಲಾಗಿದೆ. ರಾಜ್ಯದಲ್ಲಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪ್ರಜೆಗಳನ್ನು ಒದ್ದು ಹೊರಗೆ ಹಾಕಬೇಕು ಎಂದು ಅಶೋಕ್ ಆಗ್ರಹಿ ಸಿದರು.

ಭಾರತೀಯ ಯೋಧರು ಹಾಗೂ ಗುಪ್ತಚರ ಸಂಸ್ಥೆ ಕೆಲಸ ಮಾಡುತ್ತಿರುವುದರಿಂದಲೇ ಸಚಿವ ಸಂತೋಷ್‌ ಲಾಡ್‌ ಆರಾಮಾಗಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‌ ಮೈತ್ರಿ ಸರ್ಕಾರವೇ ಇದೆ. ಅಲ್ಲಿನ ಸರ್ಕಾರವನ್ನೇ ಇವರು ಪ್ರಶ್ನೆ ಮಾಡಬೇಕು ಎಂದು ಆಗ್ರಹಿಸಿದರು.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟಗೊಂಡಾಗ ಕಾಂಗ್ರೆಸ್‌ ಸರ್ಕಾರ ಏನು ಮಾಡುತ್ತಿತ್ತು, ಇಲ್ಲಿಯೂ ಅತ್ಯಾಚಾರ, ಬ್ಯಾಂಕ್‌ ದರೋಡೆ ನಡೆಯುತ್ತಿದೆ. ಹಾಗಾದರೆ ಇಲ್ಲಿ ಏಕೆ ಗುಪ್ತಚರ ದಳ ವಿಫಲವಾಗಿದೆ ಎಂದು ಪ್ರಶ್ನಿಸಿದರು.

ತಮ್ಮ ಬಾಲಿಶ, ಅಸಂಬದ್ಧ ಹೇಳಿಕೆಗಳಿಂದ ಈಗ ರಾತ್ರೋರಾತ್ರಿ ಪಾಕಿಸ್ತಾನದಲ್ಲಿ ವರ್ಲ್ಡ್ ಫೇಮಸ್ ಆಗಿಬಿಟ್ಟಿದ್ದೀರಿ ಸಿದ್ದರಾಮಯ್ಯನವರೇ,ತಮಗೆ ಅಭಿನಂದನೆಗಳು. ಮುಂದೆಂದಾದರೂ ತಾವು ಪಾಕಿಸ್ತಾನಕ್ಕೆ ಭೇಟಿ ಕೊಟ್ಟರೆ ತಮಗೆ ರಾಜಾತಿಥ್ಯ ಗ್ಯಾರೆಂಟಿ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.

ಪಾಕಿಸ್ತಾನದ ಪರ ವಕಾಲತ್ತು ವಹಿಸಿದ ಮಹಾನ್ ಶಾಂತಿದೂತ ಎಂದು ಪಾಕಿಸ್ತಾನ ಸರ್ಕಾರ ತಮಗೆ ಅಲ್ಲಿನ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ನಿಶಾನ್-ಎ-ಪಾಕಿಸ್ತಾನ ಪ್ರಶಸ್ತಿ ಕೊಟ್ಟು ಸನ್ಮಾನ ಮಾಡಿದರೂ ಅಚ್ಚರಿಯಿಲ್ಲ ಎಂದು ಕಿಚಾಯಿಸಿದ್ದಾರೆ.