ದಕ್ಷಿಣ ಕನ್ನಡದಲ್ಲಿ ನೆರೆ ನಿರ್ವಹಣೆ, ಕೊಲೆಗಳ ತಡೆಯುವಲ್ಲಿ ಸರ್ಕಾರ ವಿಫಲ:ಹೆಚ್ ಡಿ ಕೆ

ನವದೆಹಲಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ,ನೆರೆ ಪರಿಸ್ಥಿತಿಯಿಂದ ಜನರಿಗೆ ರಕ್ಷಣೆ ಕೊಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಕರಾವಳಿ ಜನರ ಕಣ್ಣಲ್ಲಿ ಕಣ್ಣೀರ ಬದಲಿಗೆ ರಕ್ತಕಣ್ಣೀರು ಸುರಿಸಲು ಸರಕಾರ ಹಪಹಪಿಸುತ್ತಿದೆ ಎಂದು ದೂರಿದ್ದಾರೆ.

ಕರಾವಳಿ ಸೇರಿ ರಾಜ್ಯದ ಉದ್ದಗಲಕ್ಕೂ ಮಳೆ ಜನಜೀವನವನ್ನು ಛಿದ್ರಗೊಳಿಸಿದೆ. ಜನ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಜವಾಬ್ದಾರಿಯುತವಾಗಿ ವರ್ತಿಸಬೇಕಿದ್ದ ರಾಜ್ಯ ಕಾಂಗ್ರೆಸ್ ಸರಕಾರ, ಕರಾವಳಿಗರ ಕಣ್ಣೀರು ಒರೆಸುವ ಬದಲು ನಿರ್ಲಕ್ಷ್ಯ ತಾಳಿದೆ ಎಂದು ಆರೋಪಿಸಿದ್ದಾರೆ.

ಮನೆ, ರಸ್ತೆ, ಸೇತುವೆಗಳು ಕುಸಿದಿವೆ. ನಗರ, ಪಟ್ಟಣ, ಹಳ್ಳಿಗಳು ಜಲದಿಗ್ಬಂಧನಕ್ಕೆ ಸಿಲುಕಿ ಜನ ಪರಿತಪಿಸು ತ್ತಿದ್ದಾರೆ. ಮೂರಾಬಟ್ಟೆಯಾಗಿರುವ ಅವರ ಬದುಕಿನ ರಕ್ಷಣೆಗೆ ಸರಕಾರ ಏನು ಕ್ರಮ ತೆಗೆದುಕೊಂ ಡಿದೆ ಎಂದು ಪ್ರಶ್ನಿಸಿದ್ದಾರೆ.

ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಮಳೆಯಲ್ಲಿ ಬದುಕು ಕೊಚ್ಚಿಹೋದ ಮೇಲೆ ಸಚಿವರಿಗೆ ಹೋಗಿ ಎಂದು ಅಪ್ಪಣೆ ಕೊಟ್ಟರೆ ಫಲವೇನು ಮಳೆ ಬರುವ ಮೊದಲು ಏನು ಮಾಡಿದ್ದಿರಿ ಇದೇನಾ ಜನಪರ ಆಡಳಿತ, ನುಡಿದಂತೆ ನಡೆಯುವುದು ಎಂದರೆ ಇದೇನಾ ಎಂದು ಕೇಳಿದ್ದಾರೆ.

ನೀವು ಎರಡು ವರ್ಷದಿಂದ ಅಧಿಕಾರದಲ್ಲಿದ್ದೀರಿ. ಅನ್ಯಪಕ್ಷಗಳನ್ನು ದೂರುತ್ತಾ ಕಾಲಹರಣ ಮಾಡುತ್ತಿದ್ದೀರಿ. ನೀವು ಅಧಿಕಾರಕ್ಕೆ ಬಂದ ಮೇಲೆ ಕರಾವಳಿ ಭಾಗದಲ್ಲಿ ಎಷ್ಟು ಹತ್ಯೆಗಳಾದವು, ಅವನ್ನು ಯಾಕೆ ಹತ್ತಿಕ್ಕಲಿಲ್ಲ, ಒಂದು ಸಮುದಾಯ ನಿಮ್ಮ ಪಕ್ಷಕ್ಕೆ ನೂರಕ್ಕೆ ನೂರರಷ್ಟು ವೋಟು ಕೊಟ್ಟಿದೆಯಲ್ಲವೇ ಅವರನ್ನೂ ರಕ್ಷಿಸಲು ವಿಫಲರಾಗಿರುವ ನೀವು, ಇತರೆ ಕೋಮುಗಳ ಮೇಲೆ ವಿಷ ಕಾರುತ್ತಿದ್ದೀರಿ ಎಂದು ಸಿದ್ದರಾಮಯ್ಯ ಕುರಿತು ಹೆಚ್ ಡಿ ಕೆ ಟೀಕಿಸಿದ್ದಾರೆ.

ಸರ್ವ ಜನಾಂಗದ ಶಾಂತಿಯ ತೋಟವನ್ನು ವಿಷ ಸರ್ಪಗಳ ತೋಟವನ್ನಾಗಿ ಪರಿವರ್ತಿಸಿದ್ದೀರಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ಸಿದ್ದರಾಮಯ್ಯನವರೇ, ನೀವೂ ಮತ್ತು ನಿಮ್ಮ ಸಂಗಡಿಗರ ಸದಾರಮೆ ನಾಟಕ ಸಾಕು, ಕೂಡಲೇ ಕರಾವಳಿಗೆ ಭೇಟಿ ನೀಡಿ ಮಳೆ, ಕೊಲೆಗಳಿಂದ ತತ್ತರಿಸಿರುವ ಅಲ್ಲಿನ ಜನತೆಗೆ ಧೈರ್ಯ ತುಂಬಿ ಎಂದು ಸಲಹೆ ನೀಡಿದ್ದಾರೆ.