ಅಮಾಯಕರ ಸಾವಿನ ಹೊಣೆ ಹೊತ್ತು ಮೃತರ ಕುಟುಂಬಗಳಿಗೆ 25 ಲಕ್ಷ ಪರಿಹಾರ ನೀಡಲಿ:ಅಶೋಕ್

ಬೆಂಗಳೂರು: ಅಮಾಯಕರ ಸಾವುಗಳಿಗೆ ರಾಜ್ಯ ಸರ್ಕಾರ ಹೊಣೆ ಹೊತ್ತು ಮೃತರ ಕುಟುಂಬಗಳಿಗೆ 25 ಲಕ್ಷ ಪರಿಹಾರ ನೀಡಬೇಕು, ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು,
ಕಪ್ ಎತ್ತಿ ಫೋಟೋ ತೆಗೆಸಿಕೊಂಡು ಸಂಭ್ರಮ ಪಟ್ಟವರು ಇವತ್ತು ಸತ್ತ ಅಮಾಯಕರ ಶವಕ್ಕೆ ಹೆಗಲು ಕೊಡಲು ಬರುವುದಿಲ್ಲ ಎಂದು ಟೀಕಿಸಿದ್ದಾರೆ.

ವಿಮಾನ ನಿಲ್ದಾಣಕ್ಕೆ ಹೋಗಿ ಸೆಲ್ಫಿ ತೆಗೆಸಿಕೊಂಡು ಖುಷಿ ಪಟ್ಟವರು ಇವತ್ತು ಸತ್ತವರ ಮನೆಗೆ ಹೋಗಿ ಕಣ್ಣೀರು ಹಾಕುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್ ಆಟಗಾರರಿಗೆ ಪೇಟ ತೊಡಿಸಿ ಹಾರ ಹಾಕಿ ಸನ್ಮಾನ ಮಾಡಿದವರು ಇವತ್ತು ಸತ್ತವರ ಸಮಾಧಿಗೆ ಮಣ್ಣು ಹಾಕಲೂ ಬರುವುದಿಲ್ಲ.

ಈ ಹೃದಯಹೀನ ಕರ್ನಾಟಕ ಸರ್ಕಾರದಲ್ಲಿ ಜನಸಾಮಾನ್ಯರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ ಎಂದು ಅಶೋಕ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಪಟ್ಟ ಗೆದ್ದಿರುವ ಆರ್ ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಸಿ ಸಂಭ್ರಮಿಸಬೇಕಾದ ಸಮಯವನ್ನ ಸೂತಕದ ಘಳಿಗೆ ಮಾಡಿರುವ ಕಾಂಗ್ರೆಸ್ ಸರ್ಕಾರದ ವಿವೇಚನಾರಹಿತ ದುರಾಡಳಿತ ಅಮಾಯಕ ಜೀವಗಳನ್ನ ಬಲಿ ತೆಗೆದುಕೊಂಡಿದೆ ಎಂದು ಕಿಡಿಕಾರಿದ್ದಾರೆ.

ಕನ್ನಡಿಗರ ಜನಪ್ರಿಯ ಆರ್ ಸಿ ಬಿ ತಂಡ ಚಾಂಪಿಯನ್ ಪಟ್ಟ ಗೆದ್ದ ಸಾಧನೆಯಲ್ಲಿ ತಾನೂ ಒಂದಷ್ಟು ಕ್ರೆಡಿಟ್ ಪಡೆಯಬೇಕೆಂಬ ಆತುರದಲ್ಲಿ ಸರಿಯಾದ ಪೂರ್ವಸಿದ್ಧತೆ ಮಾಡದೆ, ಯೋಜನೆ ಇಲ್ಲದೆ, ಪೊಲೀಸರಿಗೆ ಕಾಲಾವಕಾಶವನ್ನೂ ನೀಡದೆ ಅಭಿನಂದನಾ ಸಮಾರಂಭ ನಡೆಸಲು ರಾಜ್ಯ ಸರ್ಕಾರ ತರಾತುರಿಗೆ ಬಿದ್ದಿದ್ದೆ ಈ ಘೋರ ಅನಾಹುತಕ್ಕೆ ಕಾರಣ ಎಂದು ಜರಿದಿದ್ದಾರೆ.

ಐಪಿಎಲ್ ಪಂದ್ಯಾವಳಿಯ ಫೈನಲ್ ಮ್ಯಾಚ್ ಮೊನ್ನೆ ರಾತ್ರಿಯಷ್ಟೇ ಮುಗಿದಿದೆ. ನಿನ್ನೆ ರಾತ್ರಿಯೆಲ್ಲಾ ನಗರದಾದ್ಯಂತ ಕಾನೂನು ಸುವ್ಯವಸ್ಥೆ ಪಾಲನೆ ಮಾಡುವಲ್ಲಿ ನಿರತರಾಗಿದ್ದ ಪೊಲೀಸ್ ಸಿಬ್ಬಂದಿಗೆ ಏಕಾಏಕಿ ಮತ್ತೊಮ್ಮೆ ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಿ ಎಂದರೆ ಅದು ಕಷ್ಟಸಾಧ್ಯ ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲದೆ ಹೋದುದು ಸರ್ಕಾರದ ಸ್ಪಷ್ಟ ವೈಫಲ್ಯ ಮತ್ತು ಬೇಜವಾಬ್ದಾರಿತನ ಎಂದು ಟೀಕಿಸಿದ್ದಾರೆ.

ಚಾಂಪಿಯನ್ ಆರ್ ಸಿಬಿ ತಂಡವನ್ನ ಸ್ವಾಗತಿಸಲು, ತಮ್ಮ ನೆಚ್ಚಿನ ಆಟಗಾರರನ್ನು ನೋಡಲು, ಅವರ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಬಹು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಾರೆ ಎಂಬುದನ್ನು ಅಂದಾಜಿಸುವಲ್ಲಿ ಸರ್ಕಾರ ಎಡವಿದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಜನ ಸಂದಣಿ ನಿರೀಕ್ಷಿಸಿ ಹೆಚ್ಚಿನ ಕಾಲಾವಕಾಶ ತೆಗೆದುಕೊಂಡು ವಾರಾಂತ್ಯದಲ್ಲಿ ಈ ಕಾರ್ಯಕ್ರಮ ಮಾಡಬಹುದಿತ್ತು ಎಂದು ಅಶೋಕ್ ಅಭಿಪ್ರಾಯ ಪಟ್ಟಿದ್ದಾರೆ.