ನಾವು ಮಾಲೀಕರು ಬಾಡಿಗೆದಾರರಲ್ಲ
ಡೋಪ್ಲಿನ್ ಕಾಂಪ್ಲೆಕ್ಸ್ ವರ್ತಕರ ಸ್ಪಷ್ಟನೆ

ಮೈಸೂರು: ಮೈಸೂರಿನ ಹೃದಯ ಭಾಗದಲ್ಲಿರುವ ಡೋಪ್ಲಿನ್ ಕಾಂಪ್ಲೆಕ್ಸ್ ಆಸ್ತಿ ವಶಕ್ಕೆ ನ್ಯಾಯಾಲಯ‌ ತೀರ್ಪು ನೀಡಿದ ಬೆನ್ನಲ್ಲೇ,ಅಲ್ಲಿನ ವರ್ತಕರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಸಂತೇಪೇಟೆಯಲ್ಲಿನ ಡೋಪ್ಲಿನ್ ಕಾಂಪ್ಲೆಕ್ಸ್ ತೆರವು ಕುರಿತು ಮೈಸೂರು ಅಭಿವೃದ್ದಿ ಪ್ರಾಧಿಕಾರ ನೀಡಿರುವ ಗಡುವು ನಮಗೆ ಸಂಬಂಧಿಸಿದ್ದಲ್ಲ ಎಂದು ಕಾಂಪ್ಲೆಕ್ಸ್ ಅಸೋಸಿಯೇಷನ್ ಅಧ್ಯಕ್ಷ ಗಿರೀಶ್ ತಿಳಿಸಿದ್ದಾರೆ.

ಗುರುವಾರ ಕಾಂಪ್ಲೆಕ್ಸ್ ಆವರಣದಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕಾನೂನು ತಜ್ಞರಿಗೆ ಹೈಕೋರ್ಟ್ ತೀರ್ಪಿನ ಪ್ರತಿ ನೀಡಿ ಪರಿಶೀಲನೆ ಮಾಡಿಸಿಕೊಂಡಿದ್ದೇವೆ. ಅವರಿಂದ ವಸ್ತು ಸ್ಥಿತಿಯನ್ನು ಮನದಟ್ಟು ಮಾಡಿಕೊಂಡ ನಂತರ ವರ್ತಕರ ಅಸೋಸಿಯೇಷನ್‌ನಲ್ಲಿ ಈ ಕುರಿತು ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.

ನಮ್ಮ ಕಾನೂನು ತಜ್ಞರ ಸಲಹೆಯನ್ನು ಪರಿಗಣಿಸಿ, ಈ ವಿಚಾರವಾಗಿ ವರ್ತಕರು ಯಾರೂ ಕೂಡ ಆತಂಕಗೊಳ್ಳಬಾರದೆಂದು ತೀರ್ಮಾನ ಕೈಗೊಂಡಿದ್ದೇವೆ ಎಂದು ಗಿರೀಶ್ ತಿಳಿಸಿದರು.

ಇಲ್ಲಿರು‌ವವರೆಲ್ಲಾ ೧೯೮೦ನೇ ಇಸವಿಯಲ್ಲಿ ಈ ಸ್ಥಳ ಹಂಚಿಕೆಯಾದಾಗಿನಿಂದ ಹಿಡಿದು ಇಲ್ಲಿಯವರೆಗೂ ಎಲ್ಲರೂ ಕ್ರಯಪತ್ರ ಮಾಡಿಸಿಕೊಂಡು ಮೂಲ ಮಾಲೀಕರೇ ಆಗಿದ್ದೇವೆ, ಪ್ರತಿವರ್ಷ ಕಂದಾಯವನ್ನೂ ಕಟ್ಟಿದ್ದೇವೆ,ಹಾಗಾಗಿ ಇಲ್ಲಿ ಬಾಡಿಗೆದಾರರು ಎಂದು ಬಳಸಿರುವುದು ತಪ್ಪು ಮಾಹಿತಿ. ನಾವು ಮಾಲೀಕರೇ ಹೊರತು ಬಾಡಿಗೆದಾರರಲ್ಲ ಎಂದು ಸ್ಪಷ್ಟವಾಗಿ ಗಿರೀಶ್ ಹೇಳಿದರು.

ಡ್ಯೂಪ್ಲೀನ್ ಕಾಂಪ್ಲೆಕ್ಸ್ ಎಂದು ಹೆಸರು ಬಂದ ಮೇಲೆ ನಮ್ಮ ಮಾರ್ಕೆಟ್ ರೆಪ್ಯುಟೇಷನ್ ಹಾಳಾಗಿದೆ. ನಮ್ಮ ಬಳಿ ವ್ಯವಹಾರ ಮಾಡಬೇಕೆಂದವರು ಒಂದು ಬಾರಿ ಯೋಚನೆ ಮಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಬೇಸರ‌ ವ್ಯಕ್ತಪಡಿಸಿದರು.

ಡೋಪ್ಲಿನ್ ಕಾಂಪ್ಲೆಕ್ಸ್‌ನಲ್ಲಿರುವ ೫೧ ಅಂಗಡಿಗಳಲ್ಲಿ ಶೇಕಡ ೭೦ರಷ್ಟು ವರ್ತಕರು ಅಂದಿನ ಮುಡಾಗೆ ಹಣ ಪಾವತಿಸಿ ನೋಂದಣಿ ಮಾಡಿಸಿಕೊಂಡು ಟೈಟಲ್ ಡೀಡ್ ಕೂಡ ಪಡೆದಿದ್ದೇವೆ.

ಹೈಕೋರ್ಟ್ ನೀಡಿರುವ ತೀರ್ಪಿನ ಪ್ರತಿಯನ್ನು ನಮ್ಮ ಕಾನೂನು ತಜ್ಞರಿಗೆ ತೋರಿಸಿ ಪರಿ ಶೀಲನೆ ನಡೆಸಿದ್ದೇವೆ. ಉಚ್ಚ ನ್ಯಾಯಾಲಯದ ತೀರ್ಪಿಗೂ ನಿಮಗೂ ಯಾವುದೇ ಸಂಬಂಧವಿಲ್ಲ ನೀವು ನಿಶ್ಚಿಂತೆಯಿಂದ ಇರಿ ಎಂದು ಅವರು ಸಲಹೆ ನೀಡಿದ್ದಾರೆ ಎಂದು ಗಿರೀಶ್ ತಿಳಿಸಿದರು.

ಇಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಮಾಡಿದರೆ ಪಾರ್ಕಿಂಗ್ ವ್ಯವಸ್ಥೆ ಮಾಡಲು ಆಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ಇಲ್ಲಿ ನಾವು ಮೂಲ ಮಾಲೀಕರು. ನಮಗೆ ಇಲ್ಲಿ ಎಲ್ಲಾ ಹಕ್ಕುಗಳಿವೆ. ಹಾಗಾಗಿ ಇಲ್ಲಿ ಕಾಂಪ್ಲೆಕ್ಸ್ ಹೇಗೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಡೋಪ್ಲಿನ್ ಕಾಂಪ್ಲೆಕ್ಸ್ ಬಾಡಿಗೆದಾರರನ್ನು ಮಾರ್ಚ್ ಮೊದಲ ವಾರದಲ್ಲಿ ತೆರವು ಮಾಡಿಸುತ್ತೇವೆ ಎಂದು ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಿಂದ ಸಹಜವಾಗಿಯೇ ನಮ್ಮ ವರ್ತಕರು ಆತಂಕಗೊಂಡಿದ್ದರು.

ಅಲ್ಲದೆ ಅಂಗಡಿ ಮಾಲೀಕರಾಗಿರುವ ನಮ್ಮನ್ನು ಹೇಗೆ ತೆರವು ಗೊಳಿಸುತ್ತಾರೆ ಎಂಬ ಗೊಂದಲ ಉಂಟಾಗಿತ್ತು. ಈ ವಿಚಾರದ ಖಚಿತತೆ ಪಡೆಯಲು ನಿನ್ನೆ ನಮ್ಮ ಕೆಲವು ವರ್ತಕರು ಎಂಡಿಎ ಕಚೇರಿಗೆ ಹೋದಾಗ ಅಲ್ಲಿನ ಅಧಿಕಾರಿಗಳು ಯಾವುದೇ ಸ್ಪಷ್ಟನೆ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆದರೆ ಈಗ ನಮ್ಮ ಕಾನೂನು ತಜ್ಞರು ನೀಡಿರುವ ಸಲಹೆಯಿಂದ ನಾವು ನಿರಾತಂಕ ಕವಾಗಿದ್ದೇವೆ. ಎಂಡಿಎ ನೀಡಿರುವ ಗುಡುವು ನಮಗೆ ಸಂಬಂಧಪಟ್ಟಿದ್ದಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇವೆ, ನಾವೆಲ್ಲಾ ಎಂದಿನಂತೆ ವ್ಯಾಪಾರ ದಲ್ಲಿ ತೊಡಗಿದ್ದೇವೆ ಎಂದು ಗಿರೀಶ್ ತಿಳಿಸಿದರು.

ಅಸೋಸಿಯೇಷನ್‌ನ ಮತ್ತೊಬ್ಬರಾದ ಸುದೀಪ್ ಅವರು ಮಾತನಾಡಿ, ಅರ್ಜಿದಾರರಾದ ವಿವೇಕಾನಂದ ಅವರಿಗೂ ಇಲ್ಲಿಗೂ ಯಾವುದೇ ಸಂಬಂಧವಿಲ್ಲ.
ಡ್ಯೂಪ್ಲೀನ್ ಕಾಂಪ್ಲೇಕ್ಸ್‌ನಲ್ಲಿ ಇರುವವರಲ್ಲಿ ಶೇ.೭೫ ರಷ್ಟು ಮೂಲ ಮಾಲೀಕರು. ಇಲ್ಲಿಯ ವರನ್ನು ಬಾಡಿಗೆದಾರರು ಎಂದು ಬಿಂಬಿಸುತ್ತಿದ್ದಾರೆ ಅದು ಸರಿಯಲ್ಲ ಎಂದು ತಿಳಿಸಿದರು.

ದಾಖಲೆಗಳ ಪ್ರಕಾರ ಒಂದು ಭಾಗಕ್ಕೆ ಭಕ್ಷಿ ಬಸಪ್ಪಾಜಿ ಅರಸ್ ಅನ್ನುವವರಿಗೆ ಬಾಡಿಗೆ ಕಟ್ಟುತ್ತಿದ್ದೆವು, ಇನ್ನೊಂದು ಭಾಗ ಮನ್ನಾರ್‍ಸ್ ಎಂಪೋರಿಯಂ ಅವರದ್ದು. ಮತ್ತೊಂದು ಭಾಗ ಭಾವಸಾರ್ ಸೈಕಲ್ ಅವರದ್ದು. ಸಿಐಟಿಬಿ ಅವರು ಇವರಿಂದ ಖರೀದಿ ಮಾಡಿ ಹಂಚಿಕೆ ಮಾಡುತ್ತೇವೆ ಎಂದಿದ್ದರು ಹಾಗೂ ಮಹಾರಾಜರ ಆಜ್ಞೆ ಮೇರೆಗೆ ತುಂಬಾ ಹಳಬರಿಗೆ ಜಾಗ ನೀಡಲಾಯಿತು ಎಂದು ಮಾಹಿತಿ ನೀಡಿದರು.

ಉಪಾಧ್ಯಕ್ಷ ಜಗದೀಶ್, ಖಜಾಂಚಿ ಎನ್.ಹರ್ಷ, ಕಾರ್ಯದರ್ಶಿ ಶ್ರೀನಿವಾಸನ್ ಸೇರಿದಂತೆ ಅನೇಕ ವರ್ತಕರು ಹಾಜರಿದ್ದರು.