ಮೈಸೂರಿನಲ್ಲಿ ಬಲೂನ್‌ಗೆ ಹೀಲಿಯಂ ಅನಿಲ ಬಳಕೆ ನಿಷೇಧ

ಮೈಸೂರು: ಇತ್ತೀಚಿಗೆ ನಗರದ ಅರಮನೆ ಸಮೀಪದಲ್ಲಿ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಪೋಟ ಘಟನೆ‌ ಹಿನ್ನೆಲೆಯಲ್ಲಿ ಶಾಂತಿ, ಸುರಕ್ಷತೆ ಮತ್ತು ಜೀವ ರಕ್ಷಣೆಯ ಹಿತದೃಷ್ಟಿಯಿಂದ ಹೀಲಿಯಂ ಅನಿಲ ಬಳಸಿ ಬಲೂನ್‌ಗೆ ತುಂಬುವುದು ಮತ್ತು ಮಾರಾಟ ಮಾಡುವುದನ್ನು ನಗರದಲ್ಲಿ ನಿಷೇಧಿಸಲಾಗಿದೆ.

ಈ‌ ಕುರಿತು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಆದೇಶ ಹೊರಡಿಸಿದ್ದಾರೆ.

ಮೈಸೂರು ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ, ಸಮಾರಂಭಗಳು ಮುಂತಾದವುಗಳು ನಡೆಯುವ ಸ್ಥಳಗಳಲ್ಲಿ ಹೀಲಿಯಂ ಅನಿಲವನ್ನು ಬಳಸಿ ಬಲೂನ್‌ಗೆ ತುಂಬುವುದು, ಮಾರಾಟ ಮಾಡುವುದನ್ನು ನಿಷೇಧಿಸಿರುವುದಾಗಿ ಕಮಿಷನರ್ ತಿಳಿಸಿದ್ದಾರೆ.

ಹೀಲಿಯಂ ಅನಿಲವನ್ನು ನಿರ್ದಿಷ್ಟಗೊಂಡ ಪ್ರಮಾಣಿತ ಸುರಕ್ಷತಾ ವಿಧಾನಗಳನ್ನು ಅನುಸರಿಸದಿರುವುದು, ಇತರೆ ಸಾರ್ವಜನಿಕರು ಇದನ್ನು ಸಂಗ್ರಹಿಸುವುದು ಮತ್ತು ಬಳಕೆ ಹಾಗೂ ಸಾಗಣೆ ಮಾಡುವುದು ಹಾಗೂ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಹೀಲಿಯಂ ಅನಿಲವನ್ನು ಬಳಸಿ ಬಲೂನ್‌ಗಳನ್ನು ತುಂಬುವ ಸಂದರ್ಭದಲ್ಲಿ ಸಂಭವಿಸುವ ದುಷ್ಪಪರಿಣಾಮಗಳಿಂದ ಸಾರ್ವಜನಿಕರ ಜೀವ ಮತ್ತು ಆಸ್ತಿಗೆ ಗಂಭೀರ ಅಪಾಯ ಉಂಟಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ.