ಮೈಸೂರು: ಮೈಸೂರಿನ ಡೂಪ್ಲಿನ್ ಕಾಂಪ್ಲೆಕ್ಸ್ ನಲ್ಲಿರುವ ವರ್ತಕರಿಗೆ ನ್ಯಾಯಾಲಯ ಶಾಕ್ ನೀಡಿದೆ.
ಅನಧಿಕೃತವಾಗಿ ಸ್ವಾಧೀನದಲ್ಲಿರುವ ವರ್ತಕರನ್ನ ಖಾಲಿ ಮಾಡಿಸಿ ಆಸ್ತಿಯನ್ನ ವಶಕ್ಕೆ ಪಡೆಯುವಂತೆ ಹೈಕೋರ್ಟ್ ತೀರ್ಪು ನೀಡಿದೆ.
ಮೂರು ತಿಂಗಳ ಹಿಂದೆ ಆದೇಶವಾಗಿದ್ದರೂ ಪ್ರಾಧಿಕಾರದ ಆಯುಕ್ತ ರಕ್ಷಿತ್ ಅವರು ಕ್ರಮ ಕೈಗೊಳ್ಳುವ ಯಾವುದೇ ಆಸಕ್ತಿ ತೋರದಿರುವುದು ಅನುಮಾನಗಳಿಗೆ ಎಡೆ ಮಾಡಿದೆ.
ಮೈಸೂರಿನ ಡಿ ದೇವರಾಜ ಅರಸು ರಸ್ತೆ ಹಾಗೂ ಶಿವರಾಂಪೇಟೆಯ ವಿನೋಬಾ ರಸ್ತೆ ಮತ್ತು ದೇವರಾಜ ಮಾರುಕಟ್ಟೆಯ ಚಿಕ್ಕಗಡಿಯಾರ ಮುಂಭಾಗವಿರುವ ಡೂಪ್ಲಿನ್ ಕಾಂಪ್ಲೆಕ್ಸ್ ಅಂದಿನ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ನಿರ್ಮಿಸಿದೆ.
ಸುಮಾರು 40ಕ್ಕೂ ಹೆಚ್ಚು ಮಳಿಗೆಗಳಿರುವ ವಾಣಿಜ್ಯ ಸಂಕೀರ್ಣ ಇದು.
ಬಹುತೇಕ ಎಲ್ಲಾ ಮಳಿಗೆಗಳಲ್ಲಿ ವರ್ತಕರು ಸ್ವಾಧೀನದಲ್ಲಿದ್ದಾರೆ.
ಬಾಡಿಗೆ ಹಾಗೂ ಮಾಲೀಕತ್ವದ ವಿಚಾರದಲ್ಲಿ ವರ್ತಕರು ಹಾಗೂ ಅಂದಿನ ಮುಡಾ ನಡುವೆ ಕಾನೂನು ಹೋರಾಟ ನಡೆಯುತ್ತಿದೆ.
ವರ್ತಕರನ್ನ ಖಾಲಿ ಮಾಡಿಸುವ ಉದ್ದೇಶದಿಂದ ಪ್ರಾಧಿಕಾರ ನ್ಯಾಯಾಲಯದ ಮೊರೆ ಹೋಗಿ ಹಲವು ವರ್ಷಗಳು ಕಳೆದಿದೆ.
ತಾವೇ ಮಾಲೀಕರೆಂಬಂತೆ ವರ್ತಿಸಿದ ವರ್ತಕರು ಮುಡಾ ನಿರ್ಧಾರಕ್ಕೆ ಸಡ್ಡು ಹೊಡೆದು ಕಾನೂನು ಹೋರಾಟ ನಡೆಸುತ್ತಿದ್ದು ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.
ಎರಡೂ ಕಡೆಯ ವಾದ ವಿವಾದಗಳನ್ನ ಆಲಿಸಿದ ನ್ಯಾಯಾಲಯ ಸಧ್ಯ ಮೈಸೂರು ಅಭಿವೃದ್ದಿ ಪ್ರಾಧಿಕಾರದ ಪರ ತೀರ್ಪು ನೀಡಿದೆ.
ಅನಧಿಕೃತವಾಗಿ ಸ್ವಾಧೀನದಲ್ಲಿರುವ ವರ್ತಕರನ್ನ ಮೂರು ತಿಂಗಳ ಒಳಗಾಗಿ ತೆರುವುಗೊಳಿಸಿ ತಮ್ಮ ಸುಪರ್ಧಿಗೆ ಪಡೆಯುವಂತೆ ತೀರ್ಪು ನೀಡಿದೆ.
ಫೆ. 20ಕ್ಕೆ ಮೂರು ತಿಂಗಳ ಗಡುವು ಪೂರ್ಣಗೊಳ್ಳಲಿದೆ,
ಸುಮಾರು 250 ಕೋಟಿ ಮೌಲ್ಯದ ಆಸ್ತಿಯನ್ನು ಎಂಡಿಎ ವಶಕ್ಕೆ ಪಡೆಯಬೇಕಿದೆ.
ಆದರೆ ಮೂರು ತಿಂಗಳು ಉರುಳಿದರೂ ಪ್ರಾಧಿಕಾರ ತನ್ನ ವಶಕ್ಕೆ ಪಡೆಯುವ ಯಾವುದೇ ಆಸಕ್ತಿ ತೋರುತ್ತಿಲ್ಲ.
ಹಲವಾರು ವರ್ಷಗಳ ಹೋರಾಟಕ್ಕೆ ಜಯ ದೊರೆತರೂ ಆಯುಕ್ತ ರಕ್ಷಿತ್ ಅವರು ತಮ್ಮ ವಶಕ್ಕೆ ಪಡೆಯಲು ಮೀನಾಮೇಷ ಎಣಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.
ಎಂಡಿಎ ಪರ ವಾದ ಮಂಡಿಸಿದ ಹೈಕೋರ್ಟ್ ವಕೀಲರಾದ ಟಿ.ಪಿ.ವಿವೇಕಾನಂದ ಅವರು ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದು ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ.

