ಮೈಸೂರು: ಕಾಡಾನೆಗಳ ದಾಳಿ ಮಾಡಿದ್ದರಿಂದ ಗುಡಿಸಲು ಹಾಗೂ ಸೋಲಾರ್ ತಂತಿ ಬೇಲಿ ಸಂಪೂರ್ಣ ಹಾಳಾಗಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ.
ತಾಲೂಕಿನ ದೇವರಾಯ ಶೆಟ್ಟಿಪುರ ಗ್ರಾಮದಲ್ಲಿ ಈ ಅವಘಡ ಸಂಭವಿಸಿದ್ದು,
ಗ್ರಾಮದ ಹೆಚ್.ಜಿ.ಮಹದೇವಸ್ವಾಮಿ ಎಂಬವರಿಗೆ ಸೇರಿದ ಗುಡಿಸಲು ಹಾಗೂ ಸೋಲಾರ್ ತಂತಿ ಬೇಲಿ ಸಂಪೂರ್ಣ ನಾಶವಾಗಿದೆ.
ಗುಡಿಸಿಲಿನಲ್ಲಿ ಜಾನುವಾರುಗಳು ಇದ್ದರೂ ಸಧ್ಯ ಯಾವುದೇ ಅಪಾಯವಾಗಿಲ್ಲ. ಈ ಬಗ್ಗೆ ರೈತ ಮುಖಂಡ ಕೆಂಪಣ್ಣ ಮಾತನಾಡಿ, ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ, ಬೇಸಿಗೆ ಇರುವುದರಿಂದ ಜಮೀನಿನಲ್ಲಿ ಯಾವುದೇ ಫಸಲು ಇಲ್ಲದ ಕಾರಣ ಕಾಡಾನೆಗಳು ಊರಿನತ್ತ ಬರುತ್ತಿವೆ. ಇದರಿಂದ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈಗ ಆಗಿರುವ ನಷ್ಟಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು, ಅರಣ್ಯಾಧಿಕಾರಿಗಳು ಕಾಡಾನೆಗಳ ಹಾವಳಿಯನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣಪ್ಪ ಮತ್ತಿತರರು ಆಗ್ರಹಿಸಿದರು.

