ಮಾನಸಗಂಗೋತ್ರಿ ಕ್ಯಾಂಪಸ್‌ನಲ್ಲಿ ಶೀಘ್ರ Gen Z ಥೀಮ್ ಪೋಸ್ಟ್ ಆಫೀಸ್

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿ ಕ್ಯಾಂಪಸ್‌ನಲ್ಲಿ ಶೀಘ್ರದಲ್ಲೇ ‘Gen Z ಥೀಮ್’ ಪೋಸ್ಟ್ ಆಫೀಸ್ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ ಎಂದು ಕರ್ನಾಟಕ ಪೋಸ್ಟಲ್ ಸರ್ಕಲ್‌ ಅಂಚೆ ಸೇವೆಗಳ ನಿರ್ದೇಶಕ ಸಂದೇಶ್ ಮಹದೇವಪ್ಪ ತಿಳಿಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಇತ್ತೀಚೆಗೆ ಬೆಂಗಳೂರಿನ ಶಿಕ್ಷಣ ಸಂಸ್ಥೆಗಳಲ್ಲಿ ಪರಿಚಯಿಸಿದ ಆಧುನಿಕ ಮಾದರಿಯ ಪೋಸ್ಟಲ್ ಕೇಂದ್ರಗಳ ಮಾದರಿಯಲ್ಲಿ ಇದನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ‌ಹೇಳಿದರು.

ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರನ್ನು ಆಕರ್ಷಿಸಲು ಕಫೆ ಶೈಲಿಯ ಎರಡು ಪೋಸ್ಟ್ ಆಫೀಸ್ ಕೇಂದ್ರಗಳನ್ನು ಇತ್ತೀಚೆಗೆ ಆರಂಭಿಸಲಾಗಿದೆ.ಪೋಸ್ಟಲ್ ಇಲಾಖೆ ಈ ಯೋಜನೆಯ ಮೂಲಕ ಪರಂಪರಾಗತ ಅಂಚೆ ಸೇವೆಗಳು ಮತ್ತು ಯುವ ಪೀಳಿಗೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ವಿದ್ಯಾರ್ಥಿಗಳು ಮತ್ತು ಯುವಕರು ಸಾಮಾನ್ಯವಾಗಿ ಅಂಚೆ ಇಲಾಖೆಯ ಸೇವೆಗಳತ್ತ ದೂರವಾಗಿರುವುದರಿಂದ ಕಫೆ ಶೈಲಿಯ ಸುಂದರ ವಿನ್ಯಾಸದ ಸ್ಥಳಗಳನ್ನು ನಿರ್ಮಿಸಿ ಅವರನ್ನು ಆಕರ್ಷಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.

ಈ ಕ್ಯಾಂಪಸ್ ಪೋಸ್ಟ್ ಆಫೀಸ್‌ಗಳು ಸಾಂಪ್ರದಾಯಿಕ ಮಾದರಿಗಿಂತ ಸಂಪೂರ್ಣ ವಿಭಿನ್ನವಾಗಿರಲಿವೆ. ಗ್ರಾಹಕರಿಗೆ ಹೊಸ ಅನುಭವ ನೀಡುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಮೈಸೂರು ನಗರದಲ್ಲಿಯೂ ತಂತ್ರಜ್ಞಾನ ಸಮನ್ವಯಗೊಂಡ, ಆಕರ್ಷಕ ವಿನ್ಯಾಸದ ಹಾಗೂ ಇ-ಕಾಮರ್ಸ್ ಸೇವೆಗಳನ್ನೊಳಗೊಂಡ ಪೋಸ್ಟ್ ಆಫೀಸ್ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಇದು ಮೈಸೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಆರಂಭವಾಗಬೇಕು ಎಂಬುದು ನಮ್ಮ ಉದ್ದೇಶ,ಈ ಬಗ್ಗೆ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು ಸಿಬ್ಬಂದಿಗೆ ಸೂಚಿಸಿದ್ದೇನೆ. ಶೀಘ್ರದಲ್ಲೇ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಸಂದೇಶ್ ಮಹದೇವಪ್ಪ ವಿಶ್ವಾಸ‌ ವ್ಯಕ್ತಪಡಿಸಿದರು.