ವಿಧಾನಸೌಧದಲ್ಲೇ ಹಣ, ಚಿನ್ನಾಭರಣ ಕಳವು!ಅದೂ ಸಿಎಂ ಆಪ್ತ ಸಚಿವರ ಕಚೇರಿಯಲ್ಲಿ

ಬೆಂಗಳೂರು: ಬೇಲಿನೆ ಎದ್ದು ಹೊಲ ಮೇಯ್ದಂತೆ ಎಂಬ‌ ಮಾತಿಗೆ ಶಕ್ತಿ ಸೌಧ ಉದಾಹರಣೆಯಾಗಿದೆ.

ವಿಧಾನಸೌಧದಲ್ಲಿನ ನಗರಾಭಿವೃದ್ಧಿ ಸಚಿವರೂ ಮುಖ್ಯ ಮಂತ್ರಿಗಳ ಆಪ್ತರೂ ಆದ ಬೈರತಿ ಸುರೇಶ್‌ ಅವರ ಕಚೇರಿಯಲ್ಲೇ ಕಳ್ಳತನ ನಡೆದಿದ್ದು ಬೇಲಿಯೆ ಎದ್ದು ಹೊಲ ಮೇಯ್ದಂತಾಗಿದೆ.

ಈ ಪ್ರಕರಣ ತಡವಾಗಿ ಗೊತ್ತಾಗಿದೆ.ಕೆಲಸದ ನಿಮಿತ್ತ ಸಚಿವರ ಕಚೇರಿಗೆ ನವೀನ್ ಎಂಬವರು ಚಿನ್ನಾಭರಣ ಹಾಗೂ ಹಣವಿದ್ದ ಕೈ ಚೀಲದೊಂದಿಗೆ ಬಂದಿದ್ದರು. ಕೆಲಸ ಮುಗಿಸಿ ವಾಪಸು ಹೋಗುವಾಗ ಕೈ ಚೀಲವನ್ನು ಅಲ್ಲೇ ಮರೆತು ಹೋಗಿದ್ದರು.

ಮಾರನೇ ದಿನ ಬಂದು ನೋಡಿದಾಗ ತಾವಿಟ್ಟಿದ್ದ ಕಡೆ ಕೈ ಚೀಲ ಇರಲಿಲ್ಲ. 300 ಗ್ರಾಂ ಚಿನ್ನಾಭರಣ , 1.5 ಲಕ್ಷ ರೂ. ಕ್ಯಾಶ್ ಇದ್ದ ಕೈ ಚೀಲ ನಾಒತ್ತೆಯಾಗಿತ್ತು.

ಇದರಿಂದ ಗಾಬರಿಗೊಂಡ ನವೀನ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಸಚಿವರ ಕಚೇರಿಯಲ್ಲೇ ಕಳ್ಳತನ ನಡೆದ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ವಿಧಾನಸೌಧದ ಆಡಳಿತಾತ್ಮಕ ಮತ್ತು ಭದ್ರತಾ ವಿಷಯಗಳಿಗೆ ಸಂಬಂಧಿಸಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆಯ ಡಿ ಗ್ರೂಪ್ ನೌಕರನ ಪಾತ್ರ ಇರುವುದು ಗೊತ್ತಾಗಿದೆ.

ನೌಕರ ಕೈ ಚೀಲ ಹಿಡಿದುಕೊಂಡು ಹೋಗುವುದು ಸಿಸಿಟಿವಿಯಲ್ಲಿ ಪತ್ತೆಯಾದ ಬೆನ್ನಲ್ಲೇ ವಿಧಾನಸೌಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧನವೇನೊ ಸರಿ.ಆದರೆ ಪರಿಶೀಲನೆ ನಡೆಸದೇ ಚಿನ್ನಾಭರಣ, ನಗದನ್ನು ವಿಧಾನಸೌಧದ ಒಳಗಡೆ ಭದ್ರತಾ ಸಿಬ್ಬಂದಿ
ಬಿಟ್ಟಿದ್ದು ಸರೀನಾ, ಮೆಟಲ್ ಡಿಟೆಕ್ಟರ್, ತಪಾಸಣೆ ಕೇವಲ ನೆಪಕ್ಕೆ ಮಾತ್ರ ಆಯ್ತಾ ಸಚಿವರ ಕಚೇರಿಯಲ್ಲೇ ಭದ್ರತಾ ವೈಫಲ್ಯ,ಕಳವು ನಡೆದರೆ ಮಾಮೂಲಿ ಜನರ ಪಾಡೇನು ಎಂಬ ಪ್ರಶ್ನೆ ಎಲ್ಲರನ್ನ ಕಾಡುತ್ತಿದೆ!