ಕೇಂದ್ರದ ದೂರದೃಷ್ಟಿಯ ಬಜೆಟ್ ಸಿಎಂ ಗೆ ಅರ್ಥ ಆಗಿಲ್ಲ:ಹೆಚ್ ಡಿಕೆ ಟೀಕೆ

ಮೈಸೂರು: 16 ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಬಜೆಟ್ ಬಗ್ಗೆ ಸಂಕುಚಿತ ಭಾವನೆ ತೋರಿದ್ದಾರೆ, ಕೇಂದ್ರದ ದೂರದೃಷ್ಟಿಯ ಬಜೆಟ್ ಸಿಎಂ ಗೆ ಅರ್ಥ ಆಗಿಲ್ಲ, ಅದಕ್ಕೇನೆ ಬಜೆಟ್ ಬಗ್ಗೆ ಬಹಳ ಲಘುವಾಗಿ ಮಾತಾಡಿ ದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್ ಡಿ ಕೆ, ಖಾಲಿ ಚೆಂಬಿನ ಕ್ರೆಡಿಟ್ ರಾಜ್ಯ ಸರಕಾರಕ್ಕೆ ಹೋಗಬೇಕು, ರಾಜ್ಯ ಸರಕಾರ ಖಾಲಿ ಚೆಂಬನ್ನು ಎರಡು ವರ್ಷದಿಂದ ಜನರಿಗೆ ಕೊಡುತ್ತಿದೆ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಬಜೆಟ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು ‌‌.

ಸಿಎಂ ಗೆ ದೇವೇಗೌಡರು ಕುಮಾರಸ್ವಾಮಿನೇ ಟಾರ್ಗೆಟ್, ಜೆಡಿಎಸ್ ಪಕ್ಷವನ್ನ ಟಾರ್ಗೆಟ್ ಮಾಡಿದ್ದಾರೆ, ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಲಕ್ಷಾಂತರ ಕಾರ್ಯಕರ್ತರು ಜೆಡಿಎಸ್ ಕಟ್ಟುತ್ತಾರೆ ಎಂದು ಹೆಚ್ ಡಿ ಕೆ ‌ಕಡಕ್ಕಾಗಿ ಹೇಳಿದರು.

ಬಿಜೆಪಿ ಸಂಸದರು ಬಾಯಿ ತೆರೆಯಲ್ಲ ಅಂತೀರಾ, ಕೇಂದ್ರದ ಜೊತೆ ನಿಮ್ಮ ಸಹಕಾರ ಎಷ್ಟಿದೆ ಎಂಬುದನ್ನ ಮೊದಲು ಹೇಳಿ, ರಾಜ್ಯದ ಯಾವೊಬ್ಬ ಮಂತ್ರಿಗಳು ನನ್ನ ಬಳಿ ಬಂದಿಲ್ಲ, ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಕೇಂದ್ರ ಸಚಿವರು ತಿರುಗೇಟು ನೀಡಿದರು.

ನೀವು ಮಾಡಿರುವ ಸಾಲ ತೀರಿಸಲು ನಿಮ್ಮ ಬಳಿ ಹಣ ಇಲ್ಲಾ. ಮೆಟ್ರೋ ಪ್ರಯಾಣ ದರ ಏರಿಸಿ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡ್ತೀರಾ. ರಾಜ್ಯ ಸರ್ಕಾರ ಕೇಂದ್ರದ ಜೊತೆ ಉತ್ತಮ ಭಾಂದವ್ಯ ಇಟ್ಟುಕೊಳ್ಳಲಿ ಎಂದು ಕುಮಾರಸ್ವಾಮಿ ಕಟುವಾಗಿ ಹೇಳಿದರು.

ಕುಮಾರಸ್ವಾಮಿ ಮಂಡ್ಯಗೆ ಏನ್ ತಂದರು? ರಾಜ್ಯಕ್ಕೆ ಏನು ತಂದ್ರು ಅಂತಾ ಪ್ರತಿ ನಿತ್ಯ ಮಂಡ್ಯ ಶಾಸಕರು ಸಣ್ಣತನದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ, ಮಂಡ್ಯ ಕಾಂಗ್ರೆಸ್ ಶಾಸಕರ ಪ್ರಶ್ನೆಗಳಿಗೆ ಕೇಂದ್ರ ಬಜೆಟ್ ನಲ್ಲಿ ಉತ್ತರವಿದೆ.
ಆಟೋಮೇಟಿವ್ ರಿಸರ್ಚ್ ಇಂಡಿಯಾ ಸಂಸ್ಥೆ‌ಯ ಘಟಕ ತೆರೆಯಲು 100 ಏಕರೆ ಜಾಗವನ್ನು ಮಂಡ್ಯದಲ್ಲೇ ಕೊಡಲು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ಈಗಾಗಲೇ ಮಂಡ್ಯ ಜಿಲ್ಲಾಧಿಕಾರಿಗಳಿಗೂ ಸಹ ಪತ್ರ ಹೋಗಿದೆ. ಆಟೋ ಮೊಬೈಲ್ ಇಂಡಸ್ಟ್ರಿ ಸ್ಥಾಪನೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ, ನಾನು ನಾಟಕವಾಡಲು ಪತ್ರ ಬರೆದಿಲ್ಲ. ನಾಟಕವಾಡಲು ಪ್ರಧಾನಿಗಳು ನನಗೆ ಈ ಸ್ಥಾನ ಕೊಟ್ಟಿಲ್ಲ. ರಾಜ್ಯದ ಕೈಗಾರಿಕಾ ಅಭಿವೃದ್ಧಿಗೆ ಪ್ರಾಮಾಣಿ ಕವಾಗಿ ದುಡಿಯುತ್ತಿದ್ದೇನೆ. ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಯಾವ ಅನ್ಯಾಯವೂ ಆಗಿಲ್ಲ ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದರು.

ಶಾಸಕ ಜಿ.ಟಿ ದೇವೇಗೌಡರ ವಿಚಾರ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಜಿ.ಟಿ.ಡಿ ನಮ್ಮ ಜೊತೆಯಲ್ಲಿ ಇಲ್ಲ ಅವರು ಬೇರೆ ಬೇರೆ ಮಹಾನ್ ನಾಯಕರ ಜೊತೆಯಲ್ಲಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ಪಕ್ಷದ ಬಗ್ಗೆ ನಿಯತ್ತು ನಿಷ್ಟೆ ಯಾವುದು ಇರದವರನ್ನು ನಾವು ಜೊತೆಯಲ್ಲಿಟ್ಟುಕೊಳ್ಳಬೇಕಾ ಎಂದು ಪ್ರಶ್ನಿಸಿದ ಅವರು, ನನ್ನ ಮುಂದೆ ಇನ್ನು ಮುಂದೆ ಪದೆ ಪದೆ ಜಿ.ಟಿ.ಡಿ ಹೆಸರು ಪ್ರಸ್ತಾಪ ಮಾಡಬೇಡಿ ಎಂದು ಕಟುವಾಗಿ ಹೇಳಿದರು.