ಬೆಂಗಳೂರು: ಭಿಕ್ಷುಕರ ಕಲ್ಯಾಣಕ್ಕೆ ಮೀಸಲಿಟ್ಟ ಹಣಕ್ಕೂ ಕನ್ನ ಹಾಕಿದ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಸಮಾಜದ ಅತ್ಯಂತ ಕಟ್ಟಕಡೆಯ ವ್ಯಕ್ತಿಗಳಾದ ಭಿಕ್ಷುಕರ ಪುನರ್ವಸತಿಗಾಗಿ ಜನರಿಂದ ಸಂಗ್ರಹಿಸಿದ ಭಿಕ್ಷುಕರ ಉಪಕರವನ್ನೂ ನುಂಗಿ ನೀರು ಕುಡಿಯುತ್ತಿರುವ ಈ ಕಾಂಗ್ರೆಸ್ ಸರ್ಕಾರದ ನಡೆ ಅತ್ಯಂತ ಅಮಾನವೀಯ ಮತ್ತು ನಾಚಿಕೆಗೇಡು ಎಂದು ಅಶೋಕ್ ಟ್ವೀಟ್ ಮಾಡಿ ಜರಿದಿದ್ದಾರೆ.
ಬಡವರ ಹೆಸರಲ್ಲಿ ಅಧಿಕಾರಕ್ಕೆ ಬಂದು, ಈಗ ದೀನ-ದಲಿತರ ಹಸಿವು ನೀಗಿಸಬೇಕಾದ ಹಣವನ್ನೂ ಬಿಡದೆ ಲೂಟಿ ಮಾಡುತ್ತಿರುವುದು ಈ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿ ಎಂದಿದ್ದಾರೆ.
ಬಿಬಿಎಂಪಿಯಿಂದ ಸಂಗ್ರಹವಾದ ಆರೋಗ್ಯ ಸೆಸ್ (256 ಕೋಟಿ), ಗ್ರಂಥಾಲಯ ಸೆಸ್ (218 ಕೋಟಿ) ಸೇರಿದಂತೆ ಸಾವಿರಾರು ಕೋಟಿ ರೂಪಾಯಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಪಾವತಿಸದೆ ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಪ್ರತಿಪಕ್ಷ ನಾಯಕ ಗಂಭೀರ ಆರೋಪ ಮಾಡಿದ್ದಾರೆ.
2024-25ನೇ ಸಾಲಿನಲ್ಲಿ ಪಂಚಾಯತ್‌ಗಳು ಸಂಗ್ರಹಿಸಿದ 72.82 ಕೋಟಿಯಲ್ಲಿ ಕೇವಲ 21.55 ಕೋಟಿ ಮಾತ್ರ ಜಮೆಯಾಗಿದೆ. ಉಳಿದ 51 ಕೋಟಿ ಹಣ ಎಲ್ಲಿ ಹೋಯಿತು ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ 720 ಮಕ್ಕಳನ್ನು ಗುರುತಿಸಲಾಗಿದ್ದರೂ ಅವರ ಪುನರ್ವಸತಿ ಕೈಗೊಳ್ಳಲು ಈ ಸರ್ಕಾರಕ್ಕೆ ಟೈಮ್ ಇಲ್ಲ,ಹೈಕೋರ್ಟ್ ಚಾಟಿ ಬೀಸಿದ ಮೇಲೂ ಎಚ್ಚೆತ್ತುಕೊಂಡಿಲ್ಲ ಈ ಲಜ್ಜೆಗೆಟ್ಟ ಸರ್ಕಾರ ಎಂದು ಅಶೋಕ್ ಕಿಡಿಕಾರಿದ್ದಾರೆ.
ಭಿಕ್ಷುಕರ ಕಲ್ಯಾಣಕ್ಕೆ ಮೀಸಲಿಟ್ಟ ಶೇ.50 ರಷ್ಟು ಹಣವನ್ನು ಬೇರೆ ಯೋಜನೆಗಳಿಗೆ ಬಳಸಿಕೊಳ್ಳಲು ಹೊಂಚು ಹಾಕುತ್ತಿರುವ ಇವರ ನೀಚ ಮನಸ್ಥಿತಿಗೆ ಕೊನೆಯೇ ಇಲ್ಲದಂತಾಗಿದೆ.
ಅಹಿಂದ ಮತ್ತು ಬಡವರ ಪರ ಎಂದು ಬೊಬ್ಬೆ ಹೊಡೆಯುವ ಸಿಎಂ ಸಿದ್ದರಾಮಯ್ಯನವರೆ, ಭಿಕ್ಷುಕರ ಹೊಟ್ಟೆ ಮೇಲೆ ಹೊಡೆಯುವ ಈ ಪಾಪದ ಹಣದಲ್ಲಿ ಸರ್ಕಾರ ನಡೆಸುತ್ತಿದ್ದೀರಾ, ಜನರಿಂದ ಸಂಗ್ರಹಿಸಿದ ಪ್ರತಿಯೊಂದು ಪೈಸೆಗೂ ನೀವು ಲೆಕ್ಕ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ.
ಕೂಡಲೇ ಬಾಕಿ ಇರುವ ಎಲ್ಲಾ ಸೆಸ್ ಹಣವನ್ನು ಕೇಂದ್ರ ಪರಿಹಾರ ಸಮಿತಿಗೆ ಬಿಡುಗಡೆ ಮಾಡಬೇಕು ಮತ್ತು ಮಕ್ಕಳ ಪುನರ್ವಸತಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಅಶೋಕ್ ಎಚ್ಚರಿಸಿದ್ದಾರೆ.

