ಬೆಂಗಳೂರು: ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ 1.15 ಲಕ್ಷ ಕೋಟಿ ರೂ. ಸಾಲ ಮಾಡಿ ಬಜೆಟ್ ಮಂಡಿಸಲಿದ್ದಾರೆ, ಜನರ ಮೇಲೆ ತೆರಿಗೆಗಳ ಹೊರೆ ಖಚಿತ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಎಂದರೆ ತೆರಿಗೆ ಹೇರುವ ರಾಮಯ್ಯ,ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆಗಳ ಹೊರೆಯನ್ನು ಕಡಿಮೆ ಮಾಡಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ತಿಂಗಳಿಗೆ ನಾಲ್ಕರಂತೆ ತೆರಿಗೆ ಹಾಕುತ್ತಾರೆ ಎಂದು ಟೀಕಿಸಿದರು.
ಈಗಾಗಲೇ 36 ತೆರಿಗೆಗಳನ್ನು ಜನರ ಮೇಲೆ ಹೇರಿದ್ದಾರೆ. ಚುನಾವಣೆಗೆ ಮುನ್ನ ಜನರ ಮೇಲೆ ಹೊರೆ ಹಾಕದೆ ಗ್ಯಾರಂಟಿ ತರುತ್ತೇವೆ ಎಂದು ಭರವಸೆ ನೀಡಿ, ಈಗ ತೆರಿಗೆಗಳ ಹೊರೆ ಹೇರಿದ್ದಾರೆ. ಸಿದ್ದರಾಮಯ್ಯನವರ ಅವಧಿ ಮುಗಿಯುವ ವೇಳೆಗೆ ಒಟ್ಟು ಸಾಲ 8 ಲಕ್ಷ ಕೋಟಿ ರೂ. ಮೀರಲಿದೆ ಎಂದು ಎಚ್ಚರಿಸಿದರು.
ಸಿಎಂ ಸಿದ್ದರಾಮಯ್ಯ ಇಲ್ಲದ ಆದಾಯವನ್ನು ಸೃಷ್ಟಿಸಿ ಜಿಎಸ್‌ಡಿಪಿಗೆ ಹೋಲಿಕೆ ಮಾಡುವ ಶೇಕಡ ಪ್ರಮಾಣವನ್ನು ಕಡಿಮೆ ಇರುವಂತೆ ತೋರಿಸುತ್ತಾರೆ. ಈ ಮೂಲಕ ಆರ್ಥಿಕ ಶಿಸ್ತು ಪಾಲಿಸಿದ್ದೇವೆ ಎಂದು ಸುಳ್ಳಾಗಿ ತೋರಿಸುತ್ತಾರೆ ಎಂದು ದೂರಿದರು.
ಬಜೆಟ್ ಎಂದರೆ ಆದಾಯ ಹೆಚ್ಚಿಸಿ, ಜನರಿಗೆ ಹೊರೆಯಾಗದಂತೆ ಮಾಡಬೇಕು. ಇದನ್ನೇ ಆರ್ಥಿಕ ಪರಿಣಿತಿ ಎಂದು ಹೇಳುತ್ತಾರೆ. ಸಾಲ ಮಾಡಿ ಸರ್ಕಾರ ನಡೆಸಲು ಇವರೇ ಬೇಕಾ, ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದು ಜನರು ಅಂದುಕೊಂಡಿದ್ದು ಸಂಪೂರ್ಣ ಸುಳ್ಳಾಗಿದೆ ಎಂದು ಅಶೋಕ್ ಹೇಳಿದರು.
ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಲ ಇಲ್ಲದ ಬಜೆಟ್ ಮಂಡಿಸಿದ್ದು, ಇನ್ನೂ 24,400 ಕೋಟಿ ರೂ. ಸಾಲ ಪಡೆಯಬಹುದಿತ್ತು. ಅಂತಹ ಅವಕಾಶವಿದ್ದರೂ ಅವರು ಆಗ ಸಾಲ ಪಡೆದಿರಲಿಲ್ಲ.ಆದರೆ ಕಾಂಗ್ರೆಸ್ ಪ್ರತಿ ವರ್ಷ ಸಾಲ ಪಡೆಯುತ್ತಲೇ ಇದೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಹುದ್ದೆಗಾಗಿ ಕಚ್ಚಾಟ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗದಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ. ಇಂತಹ ಸ್ಥಿತಿಯಲ್ಲಿ ಮಂಡಿಸುವ ಬಜೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಅಂಶಗಳಿರುತ್ತದೆ, ಪೂರ್ಣವಾಗಿರುವ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ತೆರಿಗೆಗಳನ್ನು ಸಂಗ್ರಹಿಸುವುದರಲ್ಲೂ ಸರ್ಕಾರ ವಿಫಲವಾಗಿದೆ, ಕೇವಲ ಶೇ 48 ರಷ್ಟು ಸಾಧನೆ ಆಗಿದೆ. ನಿಗದಿ ಮಾಡಿದ ಅನುದಾನದಲ್ಲಿ ಕೆಲವು ಇಲಾಖೆಗಳಿಗೆ ಶೇ 40 ರಷ್ಟು ಹಣವನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಇಲಾಖೆಗಳಿಗೆ ಖರ್ಚು ಮಾಡಲು ಹಣವೇ ಇರುವುದಿಲ್ಲ ಎಂದು ಅಶೋಕ ಕಿಡಿಕಾರಿದರು.
ಕೆಪಿಎಸ್‌ಸಿ ಎಂದರೆ ಕಳ್ಳರ ದಂಧೆಯ ಕೇಂದ್ರ. ಹಣ ಕೊಡಲ್ಲ ಎಂದರೆ ಕಚೇರಿಯ ಒಳಗೂ ಬಿಡುವುದಿಲ್ಲ. ಕುಟುಂಬ, ಜಾತಿ ಎನ್ನುವುದು ಇಲ್ಲಿ ಮಾನದಂಡವೇ ಹೊರತು ಅಂಕ, ಪ್ರತಿಭೆ ಮುಖ್ಯವಲ್ಲ. ಕೆಪಿಎಸ್‌ಸಿ ಮುಚ್ಚಿ ಕೇಂದ್ರದ ಯುಪಿಎಸ್‌ಸಿ ಮಾದರಿಯ ಒಂದು ಸಂಸ್ಥೆಯನ್ನು ನಿರ್ಮಿಸಬೇಕು. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಮಾತಾಡುತ್ತೇನೆ ಎಂದು ತಿಳಿಸಿದರು.

