ಹೆಚ್.ವೈ.ಮೇಟಿಯವರ ಕನಸು ನನಸು- ಸಿದ್ದರಾಮಯ್ಯ

ಬಾಗಲಕೋಟೆ: ದಿವಂಗತ ಹೆಚ್.ವೈ.ಮೇಟಿಯವರ ಪ್ರಯತ್ನ ಮತ್ತು ಆಶಯದಂತೆ ಸರ್ಕಾರಿ ವೈದ್ಯಕೀಯ ಕಾಲೇಜು ಉದ್ಘಾಟಿಸುವ ಮೂಲಕ ಅವರ ಕನಸನ್ನು ನನಸು ಮಾಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದರು.

ಬಾಗಲಕೋಟೆಯ ನವನಗರ ಹೆಲಿ ಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣಾ ಕಾರ್ಯವನ್ನು ಪ್ರಾರಂಭಿಸಲಾಗುತ್ತಿದ್ದು, ಸಂತ್ರಸ್ತರೆಲ್ಲರಿಗೂ ಮೂರು ನಾಲ್ಕು ವರ್ಷಗಳ ಅವಧಿಯಲ್ಲಿ ವಿತರಣೆ ಪೂರ್ಣವಾಗಲಿದೆ ಎಂದು ಹೇಳಿದರು.

ಉಪಚುನಾವಣೆ ಸಂದರ್ಭದಲ್ಲಿ ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು ಸಮಾರಂಭ ಹಾಗೂ ಛತ್ರಪತಿ ಶಿವಾಜಿ ಹಾಗೂ ಬಸವಣ್ಣ ಅವರ ಮೂರ್ತಿಗೆ ತಲಾ 40 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಸೂಚಿಸಿರುವುದು ಚುನಾವಣಾ ಗಿಮಿಕ್ ಎಂದು ಬಿಜೆಪಿ ಆರೋಪಿಸಿದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ ವೈದ್ಯಕೀಯ ಕಾಲೇಜು ಏಕೆ ಮಾಡಲಿಲ್ಲ,ಇದು ಗಿಮಿಕ್ ಹೇಗಾಗುತ್ತದೆ ಎಂದು ಮರು ಪ್ರಶ್ನಿಸಿದರು.

ಈಗಾಗಲೇ ಟೆಂಡರ್ ಕರೆದು ಏಜೆನ್ಸಿ ನಿಗದಿಯಾಗಿದೆ. ಕೆಲಸ ಪ್ರಾರಂಭವಾಗಬೇಕಿದ್ದು ಅದಕ್ಕೆ ಅಡಿಗಲ್ಲು ಹಾಕಲಾಗುತ್ತಿದೆ ಎಂದು ಸಿಎಂ ತಿಳಿಸಿದರು.

ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ಉಪಚುನಾವಣೆಗೆ ಎಲ್ಲಾ ತಯಾರಿ ನಡೆದಿದ್ದು,ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಸಿಲಿಂಡರ್ ಸರಬರಾಜು ಸುಗಮಗೊಳಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಕೊಟ್ಟರೆ ವಿತರಣೆ ಮಾಡುತ್ತದೆ. ಆಹಾರ ಸಚಿವರು ಎರಡು ಸಭೆಗಳನ್ನು ಈಗಾಗಲೇ ನಡೆಸಿದ್ದು, ಕೇಂದ್ರ ಸಚಿವರಿಗೆ ಪಾತ್ರವನ್ನೂ ಬರೆಯಲಾಗಿದೆ. ಸಿಲಿಂಡರ್ ಅಭಾವವಾಗದಂತೆ ಎಚ್ಚರಿಕೆ ವಹಿಸಲು ಕೋರಲಾಗಿದೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.