ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಹಿಂದಿ ಪರಿಗಣಿಸದಿರಲು ತೀರ್ಮಾನ:ಸಿಎಂ

ಮೈಸೂರು: ಈ ವರ್ಷದಿಂದಲೇ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ತೃತೀಯ ಭಾಷೆ ಹಿಂದಿಯನ್ನು ಪರಿಗಣಿಸದಿರಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಈ ವರ್ಷದಿಂದಲೇ ತೃತೀಯ ಭಾಷೆ ಹಿಂದಿಯನ್ನು ಅಂಕಗಳಿಗೆ ಪರಿಗಣಿಸದೆ ಎಸ್ ಎಸ್ ಎಲ್ ಸಿ ಯಲ್ಲಿ 625 ಅಂಕಗಳನ್ನು 525 ಕ್ಕೆ ನಿಗದಿಪಡಿಸಲು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸರ್ಕಾರದ ತೀರ್ಮಾನಕ್ಕೆ ಬೆಂಬಲ ಬರಬಹುದು ಅಥವಾ ವಿರೋಧವೂ ವ್ಯಕ್ತವಾಗಬಹುದು. ಹಿಂದಿ ಭಾಷೆಯನ್ನು ಕಲಿಯುವುದರಲ್ಲಿ ನಮ್ಮ ಸರ್ಕಾರದ ವಿರೋಧ ಇಲ್ಲ, ಆದರೆ ಪರೀಕ್ಷೆಯ ಅಂಕಗಳಿಗೆ ಕಡ್ಡಾಯವಾಗಬಾರದು ಎಂದು ಹೇಳಿದರು.

ದಾವಣಗೆರೆ ಹಾಗೂ ಬಾಗಲಕೋಟೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಸೋಮವಾರದಿಂದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತೇನೆ, ನಂತರ ಏಪ್ರಿಲ್ 5 ರಂದು ಕೇರಳ ರಾಜ್ಯದ ಚುನಾವಣೆಯ ಪ್ರಚಾರಕ್ಕೂ ತೆರಳುತ್ತೇನೆ ಎಂದು ತಿಳಿಸಿದರು.

ಈ ಹಿಂದೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿತ್ತು. ಇದು ನಮ್ಮ ಮುಂದಿನ ಗೆಲುವಿನ ದಿಕ್ಸೂಚಿಯಾಗಿದೆ ದಾವಣೆಗೆರೆಯಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗಿದೆ ಎಂಬ ಮತ್ತೊಂದು ಪ್ರಶ್ನೆಗೆ, ಸರ್ಕಾರ ರಾಜ್ಯದಲ್ಲಿ ಡ್ರಗ್ಸ್ ದಂಧೆಯ ವಿರುದ್ಧ ಸಮರ ಸಾರಿದೆ. ಕರ್ನಾಟಕವನ್ನು ಡ್ರಗ್ಸ್ ಮುಕ್ತಗೊಳಿಸುವುದು ನಮ್ಮ ಉದ್ದೇಶ. ಮೈಸೂರಿನಲ್ಲಿ ಡ್ರಗ್ಸ್ ಜಾಲವನ್ನು ಪತ್ತೆಹಚ್ಚಿರುವ ಬಗ್ಗೆ ತಿಳಿದುಬಂದಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.